ಸುಂದರ ವದನ ಹೊಂದಿರುವುದು ತಪ್ಪೆ? ತಪ್ಪು!

ತಮಾಷೆ ಅಲ್ಲ ಸ್ವಾಮಿ. ಇಂಥ ಪ್ರಶ್ನೆ ಕೇಳಿದ ಮದುವೆಯಾಗಿರುವ ಸುಂದರ ಮಹಿಳೆಯೊಬ್ಬಳಿಗೆ ಸುಪ್ರೀಂ ಕೋರ್ಟಿನಲ್ಲಿಯೂ ನ್ಯಾಯ ದೊರೆತಿಲ್ಲ. ಸೌಂದರ್ಯವುಳ್ಳ ಮಹಿಳೆ ತನ್ನ ಬಾಸ್ ಮತ್ತು ಆತನ ಹೆಂಡತಿಯ ನಡುವೆ ಯಾವತ್ತಾದರೂ ಅಡ್ಡ ಬರಬಹುದು, ಅವರ ಮದುವೆಯನ್ನು ಮುರಿಯಬಹುದು ಎಂದು ಆಕೆಯನ್ನು ಕೆಲಸದಿಂದ ಕಿತ್ತುಹಾಕಿದ್ದು ಸರಿ ಎಂದಿದೆ ಕೋರ್ಟ್.
ಇದು ವಿಚಿತ್ರ ಅನ್ನಿಸಿದರೂ ಸತ್ಯ. ಆ ಮಹಿಳೆ ಗಂಡ ಹೆಂಡತಿಯ ನಡುವೆ ತಂದಿಡುವಂತಹ ಯಾವುದೇ ಅನೈತಿಕ ಕಾರ್ಯ ಮಾಡದಿದ್ದರೂ, ನೋಡದೇ ಇರಲು ಸಾಧ್ಯವೇ ಇಲ್ಲದಂತಹ ಆಕರ್ಷಕ ವ್ಯಕ್ತಿತ್ವದ ಸಹಾಯಕಿಯನ್ನು ಕೆಲಸದಿಂದ ತೆಗೆದು ಹಾಕಿದ್ದು ಸರಿ ಎಂದು ಪುರುಷರೇ ಇರುವ ಅಯೋವಾ ಸುಪ್ರೀಂ ಕೋರ್ಟ್ ಮಹಿಳೆಗೆ ವಿರುದ್ಧವಾಗಿ ತೀರ್ಪು ನೀಡಿದೆ.
ದಂತ ವೈದ್ಯರೊಬ್ಬರು ದಂತದ ಮೈಬಣ್ಣದ ಮಹಿಳೆಯನ್ನು ತಮ್ಮ ಸಹಾಯಕಿಯನ್ನಾಗಿ ನೇಮಿಸಿದ್ದರು. ಆಕೆ ಹಲವಾರು ವರ್ಷಗಳ ಕಾಲ ಸೇವೆಯನ್ನು ಕೂಡ ಸಲ್ಲಿಸಿದ್ದರು. ಆದರೆ, ಅದೇನಾಯಿತೋ ಏನೋ, ವೈದ್ಯರು ಮದುವೆಯಾದರು, ಮನೆಗೆ ಹೆಂಡತಿಯನ್ನು ಕರೆತಂದರು. ಆ ಹೆಂಡತಿ ವೈದ್ಯರ ಸುಂದರ ಸಹಾಯಕಿಯನ್ನು ನೋಡಿದರು, ಆಕೆಯನ್ನು ಕಿತ್ತುಹಾಕಬೇಕೆಂದು ತಾಕೀತು ಮಾಡಿದರು.
ಗಂಡನಿಗೂ ಅದೇ ಸರಿಯನ್ನಿಸಿತೇನೋ. ಪಕ್ಕದಲ್ಲಿ ಅನುರೂಪಳಾದ ಹೆಂಡತಿಯಿದ್ದರೂ ಒಂದಿಲ್ಲೊಂದು ದಿನ, ಸಹಾಯಕಿಯ ಆಕರ್ಷಣೆಗೊಳಗಾಗಿ ಹೆಂಡತಿನ್ನು ದೂರ ಮಾಡಬಹುದೇನೋ ಎಂದು ತೀರ್ಮಾನಿಸಿ ಸೌಂದರ್ಯವತಿಯನ್ನು ಕೆಲಸದಿಂದ ಕಿತ್ತುಹಾಕಿದರು. ಈ ಪರಿ ವಿನಾಕಾರಣ ಕೆಲಸ ಕಳೆದುಕೊಂಡ ಮಹಿಳೆಯ ಹೆಸರು ಮೆಲಿಸ್ಸಾ ನೆಲ್ಸನ್.
ಕೋರ್ಟ್ ಮೆಟ್ಟಿಲೇರಿದರೂ ಆಕೆಗೆ ಕಡೆಗೂ ನ್ಯಾಯ ದೊರೆಯಲೇ ಇಲ್ಲ. ಈ ರೀತಿ ಕೆಲಸದಿಂದ ಕಿತ್ತು ಬಿಸಾಕಿದ್ದರಿಂದ ಆಕೆಗೆ ಅನ್ಯಾಯವಾಗಿರಬಹುದು. ಆದರೆ, ಅಯೋವಾ ಸಿವಿಲ್ ಹಕ್ಕುಗಳ ಪ್ರಕಾರ, ಇದು ಮಹಿಳೆಗಾದ ಅನ್ಯಾಯವಲ್ಲ. ಇಲ್ಲಿ ಲಿಂಗ ಭೇದಕ್ಕಿಂತ, ಭಾವನೆಗಳಿಗೆ, ಹೃದಯಕ್ಕೆ ಆಗುವ ಗಾಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ನ್ಯಾಯಮೂರ್ತಿ ಎಡ್ವರ್ಡ್ ಮ್ಯಾನ್ಸ್‌ಫೀಲ್ಡ್ ತೀರ್ಪು ನೀಡಿದ್ದಾರೆ. ಒಪ್ತೀರಾ?
ತನ್ನ ಹೆಂಡತಿಗಿಂತ ಸುಂದರಿಯಾದ ಸೆಕ್ರೆಟರಿಯನ್ನೋ, ಸಹಾಯಕಿಯನ್ನೋ ಇಟ್ಟುಕೊಂಡಿರುವ ಗಂಡಸು ಎಷ್ಟಿಲ್ಲ ಹೇಳಿ? ಹಲವರು ಹೆಂಡತಿಯ ಹೊಟ್ಟೆ ಉರಿಸಲೆಂದೆ ಅವಳಿಗಿಂತ ಚೆನ್ನಾಗಿರುವ ಅಸಿಸ್ಟಂಟುಗಳನ್ನು ಇಟ್ಟುಕೊಂಡಿರುತ್ತಾರೆ. ಕೆಲವರು ಅವಕಾಶ ಸಿಕ್ಕರೆ, ಅನೈತಿಕ ಸಂಬಂಧವನ್ನೂ ಬೆಳೆಸಿಕೊಂಡು ಬಿಡುತ್ತಾರೆ. ಅದು ಹಾಗಾಗಬಾರದೆಂದೆ ವೈದ್ಯ ತನ್ನ ಸಹಾಯಕಿಯನ್ನು ಕಿತ್ತುಹಾಕಿದ. ಆಕೆಯನ್ನು ನೇಮಕ ಮಾಡಿಕೊಳ್ಳುವ ಮೊದಲೇ ಇದನ್ನು ಯೋಚಿಸಬೇಕಿತ್ತಲ್ವ?












Click it and Unblock the Notifications