ಸ್ಮೃತಿ ಇರಾನಿ ಬಗ್ಗೆ 'ಸೆಕ್ಸಿ' ಹೇಳಿಕೆಗೆ ಖಂಡನೆ

ಬಿಜೆಪಿ ಮಹಿಳಾ ಘಟಕದ ಪ್ರಮುಖ ಸದಸ್ಯೆ ಕಿರುತೆರೆಯ ಮಾಜಿ ಸ್ಟಾರ್ ನಟಿ ಸ್ಮೃತಿ ಇರಾನಿ ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ ಅರಗಿಸಿಕೊಳ್ಳಲಾರದೆ ಕಾಂಗ್ರೆಸ್ ಕಾರ್ಯದರ್ಶಿ, ಸಂಸದ ಸಂಜಯ್ ನಿರುಪಮ್ ಒದ್ದಾಡುತ್ತಿದ್ದಾರೆ.
ಸಂಜಯ್ ನಿರುಪಮ್ ಅವರಿಗೆ ಸ್ಮೃತಿ ಇರಾನಿ ಅವರು ಲೀಗಲ್ ನೋಟಿಸ್ ಕಳಿಸಿದ್ದಾರೆ. ಸಂಜಯ್ ಅವರ ಮೇಲೆ ಕಠಿಣ ಕ್ರಮ ಜರುಗಿಸಿ ಪಕ್ಷದಿಂದ ಹೊರ ಹಾಕುವಂತೆ ಬಿಜೆಪಿ ಆಗ್ರಹಿಸುತ್ತಿದೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಆದ ಮುಖಭಂಗ ಸಹಿಸಿಕೊಳ್ಳಲಾರದ ಕಾಂಗ್ರೆಸ್ ನಾಯಕ ಸಂಜಯ್ ಅವರು ಖಾಸಗಿ ಸುದ್ದಿ ವಾಹಿನಿಯಲ್ಲಿ ಚರ್ಚೆ ಸಂದರ್ಭದಲ್ಲಿ ಸ್ಮೃತಿ ಅವರ ಬಗ್ಗೆ ಕೇವಲವಾಗಿ ಮಾತನ್ನಾಡಿದ್ದರು.
ಕಿರುತೆರೆಯ ಅತ್ಯಂತ ಜನಪ್ರಿಯ ಮೆಗಾ ಧಾರಾವಾಹಿ ಕ್ಯೂಂಕಿ ಸಾಸ್ ಬಿ ಕಬೀ ಬಹೂ ಥಿಯ ಪ್ರಮುಖ ಪಾತ್ರಧಾರಿಯಾಗಿದ್ದ ಸ್ಮೃತಿ ಇರಾನಿ ಅವರು ಈಗ ಬಿಜೆಪಿ ಪಕ್ಷದ ಪ್ರಮುಖ ಸದಸ್ಯೆಯಾಗಿದ್ದಾರೆ.
ಸ್ಮೃತಿ ಅವರ ಹಿನ್ನೆಲೆ ಬಗ್ಗೆ ಹೇಳ ಹೊರಟ ಸಂಜಯ್ ಅವರು "Till some time ago you were dancing on TV screens and now you have become a psephologist." ಎಂದು ಹೇಳಿ ನಗಾಡಿದ್ದರು.
ಇದಾದ ನಂತರ ತಿರುಗಿ ಬಿದ್ದ ಬಿಜೆಪಿ, ಎಐಸಿಸಿ ಸೋನಿಯಾ ಗಾಂಧಿ ಅವರು ಕೂಡಲೇ ಸಂಜಯ್ ಅವರ ವಿರುದ್ಧ ಕ್ರಮ ಜರುಗಿಸಬೇಕು. ಸಂಜಯ್ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು.
ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವುದನ್ನು ಸಹಿಸದೆ ಈ ರೀತಿ ಹೇಳಿಕೆ ನೀಡುವ ಸದಸ್ಯರನ್ನು ಕಾಂಗ್ರೆಸ್ ನಿಂದ ಉಚ್ಚಾಟಿಸಬೇಕು.
ಮಹಿಳಾ ಮೋರ್ಚಾ ಮುಖ್ಯಸ್ಥೆ, ಸಂಸದೆಯೊಬ್ಬರ ಮೇಲೆ ಸಹದ್ಯೋಗಿ ಸಂಸದರೊಬ್ಬರು ಈ ರೀತಿ ಭಾಷೆ ಬಳಸುತ್ತಿರುವುದು ತೀರಾ ಅಪಮಾನಕರ ಸಂಗತಿ ಎಂದು ಬಿಜೆಪಿ ಮುಖ್ಯ ವಕ್ತಾರ ರವಿಶಂಕರ್ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಲ್ಲೂ ನಿರುಪಮ್ ಅವರ ಹೇಳಿಕೆ ವಿರುದ್ಧ ಕೂಗು ಎದ್ದಿದೆ. ಕಾಂಗ್ರೆಸ್ ವಕ್ತಾರೆ ರೇಣುಕಾ ಚೌಧುರಿ ಮಾತನಾಡಿ, ಸಂಜಯ್ ಅವರು ಈ ರೀತಿ ಹೇಳಿಕೆ ನೀಡಿರುವುದು ದುರದೃಷ್ಟಕರ. ಈ ರೀತಿ ಮನಸ್ಥಿತಿ ಅನೇಕ ಪುರುಷರಲ್ಲಿ ಇದೆ ಇದರ ವಿರುದ್ಧ ಹೋರಾಟ ಅಗತ್ಯ ಎಂದಿದ್ದಾರೆ.












Click it and Unblock the Notifications