ಮಗ ಪ್ರಧಾನಿ ಆಗೇ ಆಗ್ತಾನೆ ಅಂದ ಮೋದಿ ತಾಯಿ
ಹೀಗೆ ಆನಂದಭಾಷ್ಪಗಳಿಂದ ಹೃದಯತುಂಬಿ ಹಾರೈಸಿದವರು ಮತ್ತು ಮೋದಿ ಮನದಲ್ಲೇನಿದೆ ಎಂದು ಬಹಿರಂಗಪಡಿಸಿದವರು 62 ವರ್ಷ ವಯಸ್ಸಿನ ನರೇಂದ್ರ ಮೋದಿ ಅವರ 95ರ ವಯೋವೃದ್ಧ ತಾಯಿ ಹೀರಾ ಬಾ ಅವರು. ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾದ ನಂತರ, ಮೋದಿಯವರ ಬಿಜೆಪಿ ಪಕ್ಷ ಜಯಭೇರಿ ಬಾರಿಸಿದ್ದನ್ನು ತಿಳಿದು ಪ್ರತಿಸ್ಪಂದಿಸಿದ ಹೀರಾ ಬಾ ಅವರು, ನನ್ನ ಮಗ ಭಾರತದ ಪ್ರಧಾನಿ ಆಗಬೇಕು ಎಂದು ಇಚ್ಛಿಸಿದರು.
ಅಹ್ಮದಾಬಾದ್‌ನ ಹೊರವಲಯದಲ್ಲಿರುವ ಮಣಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ನರೇಂದ್ರ ಮೋದಿ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಶ್ವೇತಾ ಭಟ್ ಅವರನ್ನು 86 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು. ಶ್ವೇತಾ ಭಟ್ ಅವರು, ಹತ್ಯಾಕಾಂಡದ ಪ್ರಕರಣದಲ್ಲಿ ಮೋದಿ ವಿರುದ್ಧ ತಿರುಗಿಬಿದ್ದಿದ್ದ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಅವರ ಪತ್ನಿ.
ನರೇಂದ್ರ ಮೋದಿ ಅವರು 2001ರಿಂದ ಗುಜರಾತ್ ಗದ್ದಿಯ ಮೇಲೆ ಮುಖ್ಯಮಂತ್ರಿಯಾಗಿ ಅಲಂಕೃತರಾಗಿದ್ದಾರೆ. ಪ್ರಸ್ತುತ, ಮುಖ್ಯಮಂತ್ರಿ ಪದವಿಯಲ್ಲಿ ದೀರ್ಘಕಾಲ ಕಳೆದ ಗುಜರಾತ್ ಮುಖ್ಯಮಂತ್ರಿಯಾಗಿದ್ದು, ಮೂರನೇ ಬಾರಿಗೆ ಪಟ್ಟವೇರಲು ಸಿದ್ಧತೆ ನಡೆಸಿದ್ದಾರೆ.
ಆದರೆ, ಮೋದಿಯವರನ್ನು ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಕೂಡ ಬಿಂಬಿಸಲಾಗುತ್ತಿದೆ. ಗುಜರಾತ್‌ನಲ್ಲಿ ಬಿಜೆಪಿಯ ಜಯಭೇರಿಯ ರೂವಾರಿಯಾಗಿರುವ ಮೋದಿಯವರು, ಕೇಂದ್ರದಲ್ಲಿ ಕೂಡ ಪ್ರಧಾನಿ ಅಭ್ಯರ್ಥಿಯಾಗಿ 2014ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮುನ್ನಡೆಸಲಿದ್ದಾರಾ? ಎಂಬ ಪ್ರಶ್ನೆ ಎದುರಾಗಿದೆ.
ಈ ಪ್ರಶ್ನೆ ಬಿಜೆಪಿ ಹಿರಿಯರನ್ನು ಕೇಳಿದಾಗ, ಮೊದಲು ಗುಜರಾತ್ ಜಯವನ್ನು ಆಸ್ವಾದಿಸೋಣ, ಲೋಕಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಕಾಲವಿದೆ. ಸಮಯ, ಸಂದರ್ಭ ಬಂದಾಗ ಅದನ್ನು ನೋಡೋಣ ಎಂಬ ಉತ್ತರ ದೊರೆತಿದೆ. ಮೋದಿಯವರ ತಾಯಿಯೇನೋ ಭಾರತದ ಪ್ರಧಾನಿಯಾಗು ಮಗನೆ ಎಂದು ಆಶೀರ್ವಾದ ಮಾಡಿದ್ದಾರೆ. ಮೋದಿ ಮನದಲ್ಲಿ ಏನಿದೆಯೋ ಬಲ್ಲವರಾರು?













Click it and Unblock the Notifications