ಗುಜರಾತ್, ಹಿಮಾಚಲ ಫಲಿತಾಂಶ: ಸ್ಕೋರ್ ಕಾರ್ಡ್
ಅಹಮದಾಬಾದ್, ಡಿ.20: ನಿರೀಕ್ಷೆಯಂತೆ ನರೇಂದ್ರ ಮೋದಿ ಅಮೋಘ ಹ್ಯಾಟ್ರಿಕ್ ಬಾರಿಸಿದ್ದು, ಗುಜರಾತಿನಲ್ಲಿ ಮತ್ತೆ ಬಿಜೆಪಿ ಜಯಭೇರಿ ಬಾರಿಸಿದೆ. ಇನ್ನು ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಕೈಬಿಟ್ಟ ಮತದಾರ ಕಾಂಗ್ರೆಸ್ ಪಕ್ಷವನ್ನು ಅಪ್ಪಿಕೊಂಡಿದ್ದಾನೆ.
ಇಡೀ ದೇಶದ ಕುತೂಹಲ ಕೆರಳಿಸಿದ್ದ ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಮತದಾರ ಸ್ಪಷ್ಟ ಬಹುಮತ ನೀಡಿ ಮೋಡಿಗಾರ ಮೋದಿಯನ್ನು ಅಧಿಕಾರದ ಗದ್ದುಗೆಗೇರಿಸಿದ್ದಾನೆ. ಜತೆ ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನಾಗಿಯೂ ಅನುಮೋದಿಸಿದೆ.

ಇದೇ ವೇಳೆ, ಕೇಶೂಭಾಯಿ ಪಟೇಲರು ಮೋದಿಗೆ ಸಡ್ಡು ಹೊಡೆದು 167 ಸ್ಥಾನಗಳಲ್ಲಿ ನಿಂತಿದ್ದರಾದರೂ ಅವರಿಗೆ ದಕ್ಕಿದ್ದು ಅವರ ಸ್ಥಾನವೂ ಸೇರಿದಂತೆ ಕೇವಲ 3 ಸೀಟು. ಮೋದಿಗೆ ಪರೋಕ್ಷವಾಗಿ ಟಾಂಗ್ ಕೊಡಲು ಕಣಕ್ಕಿಳಿದಿದ್ದ ಜೆಡಿಯು ಶೂನ್ಯ ಸಂಪಾದನೆ ಮಾಡಿದೆ. ಪಕ್ಷೇತರ ಅಭ್ಯರ್ಥಿಗಳು ಬೋರ್ಡಿಗೇ ಇಲ್ಲವಾಗಿದ್ದಾರೆ. ಗಮನಾರ್ಹವೆಂದರೆ ಮೋದಿಗೆ ಈ ಪಕ್ಷೇತರರ ಅಗತ್ಯವೂ ಬಿದ್ದಿಲ್ಲ.
ಇನ್ನು, ಹಿಮಾಚಲ ಪ್ರದೇಶದಲ್ಲಿ ಕಳೆದ ಬಾರಿಗಿಂತ 13 ಸ್ಥಾನಗಳನ್ನು ಹೆಚ್ಚಿಗೆ ಗೆಲ್ಲುವ ಮೂಲಕ ಒಟ್ಟು 36 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಇದರಿಂದ ಸಿಎಂ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ವೀರಭದ್ರ ಸಿಂಗ್ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ. ಇಲ್ಲಿ ಕಾಂಗ್ರೆಸ್ಸಿಗೆ ಪೈಪೋಟಿ ನೀಡಿದ್ದು ಬಿಜೆಪಿ ಮಾತ್ರವೇ. ಅದು 15 ಸ್ಥಾನಗಳನ್ನು ಕಳೆದುಕೊಂಡು ತಾಂಬೂಲದೊಂದಿಗೆ ಕಾಂಗ್ರೆಸ್ಸಿಗೆ ಅಧಿಕಾರವನ್ನು ವಾಪಸ್ ಮಾಡಿದೆ.
ಪಕ್ಷಗಳ ಬಲಾಬಲ ಇಂತಿದೆ:
ಗುಜರಾತ
* ಬಿಜೆಪಿ: ಗೆಲುವು 116 (-1)
* ಕಾಂಗ್ರೆಸ್: ಗೆಲುವು 60 (-2)
* ಗುಜರಾತ್ ಪರಿವರ್ತನ್ ಪಾರ್ಟಿ 2
* ಎನ್ ಸಿಪಿ 1
ಹಿಮಾಚಲ:
* ಕಾಂಗ್ರೆಸ್: ಗೆಲುವು 36
* ಬಿಜೆಪಿ: ಗೆಲುವು 26












Click it and Unblock the Notifications