ಬಿಎಸ್ವೈ ಪಕ್ಷದ ಪ್ರಪ್ರಥಮ ಅಭ್ಯರ್ಥಿ ಹೆಸರು ಘೋಷಣೆ

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಹಾಗೆ ಮುಸ್ಲಿಮರನ್ನು ಓಲೈಸಲು ಕೆಜೆಪಿ ನಾಟಕವಾಡುವುದಿಲ್ಲ. ನಾನು ಮತ್ತೆ ಬಿಜೆಪಿಗೆ ಸೇರುತ್ತೇನೆ ಎಂದು ಮುಸ್ಲಿಮರು ಭಾವಿಸಿದ್ದರೆ, ನಿಮ್ಮ ಮನಸ್ಸಿನಿಂದ ಅದನ್ನು ತೆಗೆದು ಹಾಕಿ ಎಂದು ಯಡಿಯೂರಪ್ಪ ಮುಸ್ಲಿಂ ನಾಯಕರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಈಗ ಇರುವುದು ಬಿಜೆಪಿ ಮತ್ತು ಕೆಜೆಪಿ ಸಮ್ಮಿಶ್ರ ಸರಕಾರ. ಅದನ್ನು ಬಿಜೆಪಿ ನಾಯಕರು ಒಪ್ಪಿಕೊಳ್ಳಲೇಬೇಕು. ಈ ಸತ್ಯವನ್ನು ಒಪ್ಪಿಕೊಳ್ಳಲು ಆಗದಿದ್ದಲ್ಲಿ ವಿಧಾನಸಭೆ ವಿಸರ್ಜಿಸಿ ಜನತಾ ನ್ಯಾಯಾಲಯಕ್ಕೆ ಬನ್ನಿ ಎಂದು ಯಡಿಯೂರಪ್ಪ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ನಾನಾಗಿ ಜಗದೀಶ್ ಶೆಟ್ಟರ್ ಸರಕಾರವನ್ನು ಉರುಳಿಸುವುದಿಲ್ಲ. ಇದರ ಹಿಂದೆ ರಾಜಕೀಯ ತಂತ್ರಗಾರಿಕೆಯಿದೆ. ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಾನೇ, ಇದು ನಾಡಿಗೆಲ್ಲಾ ತಿಳಿದಿರುವ ವಿಚಾರ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಇದೇ ಭಾನುವಾರ (ಡಿ 23) ಬೆಂಗಳೂರು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಪಕ್ಷದ ಕಾರ್ಯಕರ್ತರ ಮತ್ತು ಪದಾಧಿಕಾರಿಗಳ ಸಭೆ ನಡೆಯಲಿದೆ, ಅಲ್ಲಿ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಇಂದೋ ನಾಳೆಯೋ ಪತನವಾಗಲಿರುವ ಬಿಜೆಪಿ ಸರಕಾರಕ್ಕೆ ನನ್ನ ಬೆಂಬಲಿಗ ಶಾಸಕರು ಮತ್ತು ಸಚಿವರು ಆಸರೆಯಾಗಿದ್ದಾರೆ. ಅವರ ತಂಟೆಗೆ ಹೋಗದೆ ಉಳಿದ ಅವಧಿಯಲ್ಲಿ ಅಧಿಕಾರದ ರುಚಿ ಅನುಭವಿಸಿ ಚುನಾವಣೆಗೆ ಬನ್ನಿ ಎಂದು ಬಿಜೆಪಿ ನಾಯಕರುಗಳಿಗೆ ಯಡಿಯೂರಪ್ಪ ಕಿವಿಮಾತನ್ನು ಹೇಳಿದ್ದಾರೆ.
ರಾಮನಗರ ನನ್ನ ಕರ್ಮಭೂಮಿ, ಇದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷ ಮತ್ತು ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದ ಸಂಸದ ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ಘೋಷಿಸಿದ್ದನ್ನು ಇಲ್ಲಿ ನಾವು ಸ್ಮರಿಸಿಕೊಳ್ಳಬಹುದು.












Click it and Unblock the Notifications