ಗುಜರಾತ್, ಹಿಮಾಚಲ ಚುನಾವಣೆ ಫಲಿತಾಂಶ LIVE

ನವೆಂಬರ್ 4ರಂದು ಹಿಮಾಚಲ ಪ್ರದೇಶದಲ್ಲಿ ಹಾಗೂ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 13 ಮತ್ತು 17ರಂದು ಮತದಾನ ನಡೆದಿತ್ತು. ಹಿಮಾಚಲದಲ್ಲಿ ಒಟ್ಟು 68 ಸ್ಥಾನಗಳು ಮತ್ತು ಗುಜರಾತಿನಲ್ಲಿ 182 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಮೂರನೆಯ ಬಾರಿ ಮುಖ್ಯಮಂತ್ರಿಯಾಗಲು ಬಯಸಿರುವ ಬಿಜೆಪಿ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಸಿನ ವೀರಭದ್ರ ಸಿಂಗ್ ಅವರ ಪಾಲಿಗೆ ಇದು ದೊಡ್ಡ ಸವಾಲಾಗಿದೆ.
ಮತದಾನ ಬಹುತೇಕ ಶಾಂತಿಯುತವಾಗಿತ್ತು ಎಂಬುದು ಗಮನಾರ್ಹ. ಗುಜರಾತ್ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ದಾಖಲೆಯ ಶೇ. 70ರಷ್ಟು ಮತದಾನ ನಡೆದಿರುವುದು ಅತೀವ ಕುತೂಹಲ ಕೆರಳಿಸಿದ್ದರೆ ಹಿಮಾಚಲದಲ್ಲಿಯೂ ಅಷ್ಟೇ ಮತದಾನವಾಗಿದೆ.
ಸಹಜವಾಗಿಯೇ ಈ ಭಾರೀ ಪ್ರಮಾಣದ ಮತದಾನ ಭಾರಿ ಕುತೂಹಲ ಕೆರಳಿಸಿದೆ. ಇದರ ಪ್ರಯೋಜನ ಯಾವ ಪಕ್ಷಕ್ಕೆ ಲಭಿಸಲಿದೆಯೆಂಬ ಲೆಕ್ಕಾಚಾರದಲ್ಲಿ ರಾಜಕೀಯ ವಿಶ್ಲೇಷಕರು ಈಗಾಗಲೇ ತೊಡಗಿದ್ದಾರೆ.
182 ಸದಸ್ಯ ಬಲದ ನಿರ್ಗಮನ ವಿಧಾನಸಭೆಯಲ್ಲಿ ಬಿಜೆಪಿ 117 ಸದಸ್ಯರನ್ನು ಹೊಂದಿದೆ. 22 ವರ್ಷಗಳ ಬಳಿಕ ಈ ಬಾರಿ ಗುಜರಾತ್‌ನಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್ ಪಕ್ಷವು ಶತಾಯಗತಾಯ ಪ್ರಯತ್ನಿಸುತ್ತಿದೆ.
ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ, ಗುಜರಾತ್ ಪರಿವರ್ತನ್ ಪಾರ್ಟಿಯ (ಜಿಪಿಪಿ) ಅಧ್ಯಕ್ಷ ಕೇಶುಭಾಯಿ ಪಟೇಲ್, ಕಾಂಗ್ರೆಸ್‌ನ ಶ್ವೇತಾ ಭಟ್ ಮತ್ತು ಅರ್ಜುನ್ ಮೋಡವಾಡಿಯ... ಹಿಮಾಚಲದಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ವೀರಭದ್ರ ಸಿಂಗ್, ಹಾಲಿ ಮುಖ್ಯಮಂತ್ರಿ ಪ್ರೇಂ ಕುಮಾರ್ ಧುಮಾಲ್ ಸೇರಿದಂತೆ ಅನೇಕ ಪ್ರಮುಖ ಅಭ್ಯರ್ಥಿಗಳ ಭವಿಷ್ಯವನ್ನು ಇಂದಿನ ಚುನಾವಣಾ ಫಲಿತಾಂಶ ನಿರ್ಧರಿಸಲಿದೆ.
ಟೆಲಿವಿಷನ್ ಚಾನೆಲ್‌ಗಳು ನಡೆಸಿರುವ ಮತಗಟ್ಟೆ ಸಮೀಕ್ಷೆಗಳು (Exit Polls) ನುಡಿದಿರುವ ಭವಿಷ್ಯದ ಪ್ರಕಾರ ಗುಜರಾತಿನಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೂರನೇ ಸಲ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬಹುದು. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಪಡೆಯಬಹುದು.
ವಿಸೂ : ನಮ್ಮ ಅಂತರ್ಜಾಲ ತಾಣದಲ್ಲಿ ಫಲಿತಾಂಶ LIVE ಪ್ರಕಟವಾಗಲಿದೆ. ಗುರುವಾರ ಬೆಳಗ್ಗೆ 8ರಿಂದ.












Click it and Unblock the Notifications