ಇನ್ಫಿ ವೀಸಾ ವಂಚನೆ : ಕಿರುಕುಳ ಕೇಸ್ ವಾಪಸ್

ವೀಸಾ ವಂಚನೆಯನ್ನು ಬಯಲಿಗೆಳೆದ ನಂತರ ಕಂಪನಿ ತನಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ, ಕ್ಯಾಲಿಫೋರ್ನಿಯಾದ ಇನ್ಫೋಸಿಸ್‌ನಲ್ಲಿ ಅಕೌಂಟ್ಸ್ ಮ್ಯಾನೇಜರ್ ಆಗಿದ್ದ ಸತ್ಯ ದೇವ್ ತ್ರಿಪುರನೇನಿ ಅವರು ದಾವೆ ಹೂಡಿದ್ದರು. ಶುಕ್ರವಾರ ಬಿಡುಗಡೆಗೊಳಿಸಲಾಗಿರುವ ಹೇಳಿಕೆಯಲ್ಲಿ, ಕಂಪನಿ ಮತ್ತು ತ್ರಿಪುರನೇನಿ ನಡುವೆ ಕೇಸ್ ಇತ್ಯರ್ಥವಾಗಿದೆ ಎಂದು ತಿಳಿಸಿದೆ. ಆದರೆ, ಎಷ್ಟು ಮೊತ್ತಕ್ಕೆ ಇತ್ಯರ್ಥವಾಗಿದೆ ಎಂಬ ವಿವರ ನೀಡಿಲ್ಲ.
ಇದೇ ವರ್ಷದ ಆಗಸ್ಟ್ 2ರಂದು ತ್ರಿಪುರನೇನಿ ಅವರು ಕ್ಯಾಲಿಫೋರ್ನಿಯಾದ ಜಿಲ್ಲಾ ನ್ಯಾಯಾಲಯದಲ್ಲಿ ಇನ್ಫೋಸಿಸ್ ವಿರುದ್ಧ ಕಿರುಕುಳ ಕೊಟ್ಟ ದಾವೆ ಹೂಡಿದ್ದರು. ಅಮೆರಿಕದ ವೀಸಾ ನೀತಿ, ಬಿಸಿನೆಸ್ ವೀಸಾ ನಿಯಮಗಳನ್ನು ಮೀರಿ ಭಾರತದ ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳುಹಿಸುವ ಮೂಲಕ ದೊಡ್ಡ ವಂಚನೆ ಜಾಲದಲ್ಲಿ ಇನ್ಫೋಸಿಸ್ ಮುಳುಗಿದೆ ಎಂದು ತ್ರಿಪುರನೇನಿ ಆರೋಪಿಸಿದ್ದರು. ಈ ಆರೋಪ ಹೊರಿಸಿದ ನಂತರ ಕಂಪನಿ ತನಗೆ ಕಿರುಕುಳ ನೀಡುತ್ತಿದೆ ಎಂದು ದೂರಿದ್ದರು.
ಐದು ವರ್ಷ ಅಕೌಂಟ್ಸ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ ನಂತರ ಕಂಪನಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ತ್ರಿಪುರನೇನಿ ಕಂಪನಿಗೆ ರಾಜೀನಾಮೆ ನೀಡಿದ್ದರು. ಇಂಥದೇ ಬಗೆಯ ಕೇಸನ್ನು ಜಾಕ್ ಪಾಮರ್ ಎಂಬುವವರು ಕೂಡ ದಾಖಲಿಸಿದ್ದರು. ಆದರೆ ಆ ಕೇಸಿನಲ್ಲಿ ಪಾಮರ್‌ಗೆ ಸೋಲಾಗಿತ್ತು. ಕೇಸಿನಲ್ಲಿ ನಡೆಸುವ ಹೋರಾಟದಿಂದ ಉಂಟಾಗುವ ಅನಗತ್ಯ ಖರ್ಚುವೆಚ್ಚಗಳನ್ನು ತಡೆಯುವ ಉದ್ದೇಶದಿಂದ ಕೇಸನ್ನು ಇತ್ಯರ್ಥ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ಇನ್ಫೋಸಿಸ್ ಹೇಳಿದೆ.












Click it and Unblock the Notifications