ಶುಕ್ರವಾರ ಶಿರ್ವದಲ್ಲಿ ಜೆಸ್ ಅಂತಿಮ ಸಂಸ್ಕಾರ?

ತನಗರಿವಿಲ್ಲದೆ, ಆಸ್ಟ್ರೇಲಿಯಾದ 2ಡೇ ಎಫ್ಎಮ್ ರೇಡಿಯೋ ಜಾಕಿಗಳು ಆಡಿದ ಆಟದಲ್ಲಿ ಬಲಿಪಶುವಾದ ಜೆಸಿಂತಾ ಗುರುವಾರ ಲಂಡನ್‌ನಲ್ಲಿರುವ 7ನೇ ಕಿಂಗ್ ಎಡ್ವರ್ಡ್ ಆಸ್ಪತ್ರೆಯ ಬಳಿ ನಿಗೂಢವಾಗಿ ಸಾವಿಗೀಡಾಗಿದ್ದರು. ಕೇಂಬ್ರಿಜ್ ರಾಜಕುಮಾರಿ ಕೇಟ್ ಮಿಡ್ಲ್‌ಟನ್‌ಳಿಗೆ ಸಂಬಂಧಿಸಿದ ಖಾಸಗಿ ವಿಷಯಗಳು ತನ್ನ ಮೂಲಕ ಬಹಿರಂಗವಾಗಿದ್ದರಿಂದ ಜೆಸಿಂತಾ ತೀವ್ರ ಆಘಾತಗೊಂಡಿದ್ದರು. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ಜೆಸಿಂತಾ ಪೋಸ್ಟ್‌ಮಾರ್ಟಂ ವರದಿ ಇನ್ನು ಬಂದಿಲ್ಲ. ಸ್ಕಾಟ್ಲಂಡ್ ಯಾರ್ಡ್ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಸಾವಿಗೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನು ಪಡೆಯುತ್ತಿದ್ದಾರೆ. ಈ ದುರ್ಘಟನೆಯ ಹಿಂದಿನ ಸತ್ಯವನ್ನು ಅರಿಯಲು ಪ್ರಯತ್ನಿಸುತ್ತಿದ್ದಾರೆ. ಮಂಗಳವಾರ ಜೆಸಿಂತಾ ಗಂಡ ಬೆನೆಡಿಕ್ಟ್ ಬರ್ಬೋಜಾ ಅವರಿಗೆ ಜೆಸಿಂತಾ ದೇಹ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಬೆನೆಡಿಕ್ಟ್ ಅವರಿಂದಲೂ ಹೆಚ್ಚಿನ ಮಾಹಿತಿ ದೊರೆಯದಿದ್ದರಿಂದ ಶಿರ್ವದಲ್ಲಿರುವ ಎರಡೂ ಕುಟುಂಬಗಳು ಜೆಸಿಂತಾ ಸಾವಿನ ಬಗ್ಗೆ ಬಾಯಿ ಬಿಡಲು ಹಿಂಜರಿಯುತ್ತಿದ್ದಾರೆ.
ಜೆಸಿಂತಾ ಅವರ ದೇಹವನ್ನು ಹಸ್ತಾಂತರಿಸಲು ಬ್ರಿಟನ್ ಅಧಿಕಾರಿಗಳನ್ನು ಕೋರಲಾಗಿದ್ದು, ಬುಧವಾರ ನೀಡಬಹುದೆಂದು ನಿರೀಕ್ಷಿಸಲಾಗಿದೆ. ದೇಹವನ್ನು ಜೆಸಿಂತಾ ಪತಿ ಬೆನೆಡಿಕ್ಟ್, ಮಕ್ಕಳಾದ ಜುನಲ್ ಮತ್ತು ಲಿಶಾ ಅವರು ತರಲಿದ್ದಾರೆ. ಕ್ಯಾಥೋಲಿಕ್ ಸಂಪ್ರದಾಯದ ಪ್ರಕಾರ ಶಿರ್ವದಲ್ಲಿ ಶುಕ್ರವಾರ ಜೆಸಿಂತಾ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಜೆಸಿಂತಾ ಸಹೋದರ ನವೀನ್ ಸಾಲ್ಡಾನಾ ಹೇಳಿದ್ದಾರೆ. ಲಂಡನ್‌ನಲ್ಲಿ ನಡೆಸಲಾಗುವ ಶವಪರೀಕ್ಷೆ ತೃಪ್ತಿದಾಯಕವಾಗಿರದಿದ್ದರೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 154ರ ಪ್ರಕಾರ ಭಾರತದಲ್ಲಿ ಮತ್ತೊಮ್ಮೆ ಶವಪರೀಕ್ಷೆ ಮಾಡಿಸಲೂ ಜೆಸಿಂತಾ ಕುಟುಂಬ ಚಿಂತಿಸುತ್ತಿದೆ.
ಕೋಟಿ ಪರಿಹಾರ : ಎರಡನೇ ಎಲಿಜಬೆತ್ ರಾಣಿ ಮತ್ತು ವಿಲಿಯಂ ಎಂದು ಹೇಳಿಕೊಂಡು ಬಸುರಿಯಾಗಿರುವ ರಾಜಕುಮಾರಿ ಕೇಟ್‌ಳ ಖಾಸಗಿ ಮಾಹಿತಿ ಪಡೆದು ಪ್ರಸಾರ ಮಾಡಿದ 2ಡೇ ಎಫ್ಎಂ ರೇಡಿಯೋ ಜೆಸಿಂತಾ ಗಂಡನಿಗೆ 2 ಕೋಟಿ 83 ಲಕ್ಷ ರು. ಪರಿಹಾನ ನೀಡಲು ಮುಂದೆ ಬಂದಿದೆ.











Click it and Unblock the Notifications