ಟೆಕ್ಸಾಸ್ ಕಂಪನಿಯಿಂದ ನೂರಾರು ಮಂದಿ ಮನೆಗೆ

ಜಾಗತಿಕವಾಗಿ ಕಂಪನಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅನಿವಾರ್ಯವಾಗಿ ಭಾರತದ ವಿಭಾಗಗಳಲ್ಲಿ ನೂರಾರು ಮಂದಿ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಉದ್ಯೋಗಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಡಲ್ಲಾಸ್ ಮೂಲದ ಟೆಕ್ಸಾಸ್ ಇನ್ಸ್ ಟ್ರೂಮೆಂಟ್ಸ್ ಕಂಪನಿ ವಕ್ತಾರರು ಹೇಳಿದ್ದಾರೆ.
ಭಾರತದಲ್ಲಿ ಸುಮಾರು 300 ರಿಂದ 500 ಮಂದಿ ಇಂಜಿನಿಯರ್ ಗಳು ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಮೊಬೈಲ್ ಫೋನ್ ಹಾಗೂ ಟ್ಯಾಬ್ಲೆಟ್ ಗಳಲ್ಲಿರುವ ಚಿಪ್ ಗಳನ್ನು ತಯಾರಿಸುವುದರಲ್ಲಿ ಅಗ್ರಗಣ್ಯ ಸಂಸ್ಥೆಯಾದ ಟಿಐ ತನ್ನ ಉದ್ಯೋಗಿಗಳಲ್ಲಿ ನುರಿತರನ್ನೇ ಆಯ್ದುಕೊಂಡಿದೆ.
2 ರಿಂದ 3 ವರ್ಷ ಅನುಭವವುಳ್ಳವರು ಹಾಗೂ ಕೆಲವು ಹಿರಿಯ ವ್ಯವಸ್ಥಾಪಕರು ಕೆಲಸ ಬಿಡಬೇಕಾಗುತ್ತದೆ. ಬೆಂಗಳೂರಿನ ವಿಭಾಗದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬರಲಿದೆ ಎಂದು ಟಿಐ ವಕ್ತಾರರು ಹೇಳಿದ್ದಾರೆ.
ಈ ಬಗ್ಗೆ ಟಿಐ ಉದ್ಯೋಗಿಗಳು ಕೂಡಾ ಪ್ರತಿಕ್ರಿಯಿಸಿದ್ದು ಸುಮಾರು 500 ಜನ ಉದ್ಯೋಗ ಬಿಡುವ ಸಾಧ್ಯತೆಯಿದೆ ಎಂದರು.
1985 ರಲ್ಲಿ ಬೆಂಗಳೂರಿಗೆ ಕಾಲಿರಿಸಿ ಮೊದಲ ಅಭಿವೃದ್ಧಿ ಕೇಂದ್ರ ಆರಂಭಿಸಿದ ಟೆಕ್ಸಾಸ್ ಇನ್ಸ್ ಟ್ರೂಮೆಂಟ್ಸ್ ಸಂಸ್ಥೆ ಭಾರತದಲ್ಲಿ 1,500ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ.
ಮೊಬೈಲ್ ಸಹವಾಸ ಸಾಕು: ಮೊಬೈಲ್ ಪ್ರೊಸೆಸರ್ ಮಾಡುವ ಘಟಕವನ್ನೇ ಸಂಪೂರ್ಣವಾಗಿ ಮುಚ್ಚಲು ಟಿಐ ನಿರ್ಧರಿಸಿದೆ ಎನ್ನಲಾಗಿದೆ. ಸುಮಾರು 1,700 ಜನರನ್ನು ಮನೆಗೆ ಕಳಿಸಲು ಪಿಂಕ್ ಸ್ಲಿಪ್ ಸಿದ್ಧವಾಗಿದೆ.
ಮೊಬೈಲ್ ಪ್ರೊಸೆಸರ್ ಬದಲು ಕಾರು ಹಾಗೂ ಗೃಹೋಪಯೋಗಿ ವಸ್ತುಗಳಿಗೆ ಅಗತ್ಯ ಪ್ರೊಸೆಸರ್ ಹಾಗೂ ಉಪಕರಣಗಳನ್ನು ಉತ್ಪಾದಿಸಿ ಹೆಚ್ಚಿನ ಲಾಭ ಪಡೆಯಲು ಟಿಐ ನಿರ್ಧರಿಸಿದೆ.
ಬದ್ಧ ವೈರಿ ಕ್ವಾಲ್ ಕಾಮ್ ವಿರುದ್ಧ ಸ್ಪರ್ಧೆಯಲ್ಲಿ ಟಿಐ ಸೋತಿದೆ. ಇನ್ನೂ ಆಪಲ್ ಹಾಗೂ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಕೋ.ಲಿ ತಮ್ಮದೇ ಆದ ಪ್ರೊಸೆಸರ್ ತಯಾರಿಸಿಕೊಳ್ಳುತ್ತಿದೆ. ಹೀಗಾಗಿ ಟಿಐ ಪ್ರೊಸೆಸರ್ ಗಳನ್ನು ಕೇಳುವವರಿಲ್ಲ.
ಜಾಗತಿಕವಾಗಿ 35,000 ಉದ್ಯೋಗಿಗಳನ್ನು ಹೊಂದಿರುವ ಟಿಐ ಸಂಸ್ಥೆ ಉದ್ಯೋಗಿಗಳ ಕಡಿತದ ನಂತರ ಸುಮಾರು 450 ಮಿಲಿಯನ್ ಡಾಲರ್ ಉಳಿತಾಯ ಮಾಡುವ ನಿರೀಕ್ಷೆಯಲ್ಲಿದೆ.
ನ್ಯಾಸ್ಡಕ್ ನಲ್ಲಿ ಟಿಐ ಷೇರುಗಳು 28.76 ಡಾಲರ್ ನಂತೆ ಶೇ 2 ರಷ್ಟು ಕುಸಿತ ಕಂಡಿದೆ.
ಟಿಐ ಸಂಸ್ಥೆ ತಡವಾಗಿಯಾದರೂ ಬದಲಾಗುತ್ತಿರುವ ಮಾರುಕಟ್ಟೆಗೆ ಹೊಂದಿಕೊಳ್ಳಬೇಕಾಗಿರುವುದು ಅನಿವಾರ್ಯ. ಉದ್ಯೋಗಿಗಳ ಕಡಿತ ತಡೆಯಲು ಸಾಧ್ಯವಿಲ್ಲ ಎಂದು ಟಿಐ ಭಾರತದ ಸಂವಹನ ವಿಭಾಗದ ನಿರ್ದೇಶಕ ಕೆಎಸ್ ನರಹರಿ ಹೇಳಿದ್ದಾರೆ.
ಟಿಐ ಹೆಗ್ಗಳಿಕೆ: ಭಾರತದಲ್ಲಿ ಮೊಟ್ಟಮೊದಲ ಸ್ವದೇಶಿ ಸೆಲ್ ಫೋನ್ ನಿರ್ಮಾಣ ಮಾಡಿದ್ದು ಟಿಐ ಹಾಗೂ 80 ರ ದಶಕದಲ್ಲಿ ಮೊಟ್ಟಮೊದಲ ಬಾರಿಗೆ ಸ್ಯಾಟಲೈಟ್ ಡಿಶ್ ಅಳವಡಿಸಿದ ಮೊದಲ ಬಹುರಾಷ್ಟ್ರೀಯ ಕಂಪನಿಯಾಗಿದೆ.
ಇಂಟೆಲ್, ಸ್ಯಾಮ್ಸಂಗ್ ನಂತರ ಸೆಮಿಕಂಡೆಕ್ಟರ್ ಕ್ಷೇತ್ರದಲ್ಲಿ ಮೂರನೇ ಅತಿದೊಡ್ಡ ಉತ್ಪಾದನಾ ಸಂಸ್ಥೆಯಾಗಿರುವ ಟಿಐ ಸುಮಾರು 14 ಬಿಲಿಯನ್ ಡಾಲರ್(77,000 ಕೋಟಿ ರು ) ಆದಾಯ ಹೊಂದಿದೆ.












Click it and Unblock the Notifications