ಮತ್ತೆ ಡಿವಿಎಸ್ ರಾಜ್ಯಾಧ್ಯಕ್ಷ, ಶೆಟ್ಟರ್ ದೆಹಲಿಗೆ ದೌಡು

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಾನು ಈ ತನಕ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ, ಪಕ್ಷದ ಹೈಕಮಾಂಡ್ ಬಯಸಿದರೆ ಪುತ್ತೂರಿನಲ್ಲಿ ವಿಧಾನಸಭೆಗೆ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೊಸ ಪಕ್ಷ ಸ್ಥಾಪನೆಗೆ ನಿಧಾನಗತಿಯಾದರೂ ಬಿಜೆಪಿ ತಕ್ಕ ಉತ್ತರ ನೀಡುತ್ತಿದೆ. ಯಡಿಯೂರಪ್ಪ ಬೆಂಬಲಿತ ಬಿಜೆಪಿ ಶಾಸಕರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.
ನ.30 ರಂದು ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ಬಿಜೆಪಿ ತನ್ನ ರಾಜಕೀಯ ದಾಳಗಳನ್ನು ಉದುರಿಸಲು ಸಿದ್ಧತೆ ನಡೆಸಿದೆ. ಇದರಲ್ಲಿ ಪ್ರಮುಖವಾದದ್ದು, ಡಿಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಹೊಂದಿರುವ ಈಶ್ವರಪ್ಪ ಅವರಿಂದ ರಾಜ್ಯಾಧ್ಯಕ್ಷ ಸ್ಥಾನ ಹಿಂಪಡೆದು ಮತ್ತೊಮ್ಮೆ ಸದಾನಂದ ಗೌಡರಿಗೆ ನೀಡುವುದು.
ಡಿ.9 ರಂದು ಕರ್ನಾಟಕ ಜನತಾ ಪಕ್ಷ ಉದಯವಾಗಿ ಅದರ ಅಧ್ಯಕ್ಷರಾಗಿ ಯಡಿಯೂರಪ್ಪ ವೇದಿಕೆಯೇರುತ್ತಿದ್ದಂತೆ ಸದಾನಂದ ಗೌಡರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಘೋಷಿಸುವ ಸಾಧ್ಯತೆಯಿದೆ. ಒಂದು ವೇಳೆ ಇದಕ್ಕೆ ಅವರು ಒಪ್ಪದಿದ್ದರೆ, ಪ್ರಚಾರ ಸಮಿತಿ, ಸಮನ್ವಯ ಸಮಿತಿಯ ಅಧ್ಯಕ್ಷ ಸ್ಥಾನ ಹೀಗೆ ಯಾವುದಾದರೊಂದು ಮಹತ್ವದ ಜವಾಬ್ದಾರಿ ನೀಡುವ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸಿದೆ.
ಈ ಬಗ್ಗೆ ಚರ್ಚಿಸಲು ಜಗದೀಶ್ ಶೆಟ್ಟರ್ ಅವರನ್ನು ದೆಹಲಿ ನಾಯಕರು ಕರೆಸಿಕೊಂಡಿದ್ದಾರೆ. ಧರ್ಮೇಂದ್ರ ಪ್ರಧಾನ್ ಬೆಂಗಳೂರಿಗೆ ಬಂದು ಹೋದ ಮೇಲೆ ಸದಾನಂದ ಗೌಡರ ಜೊತೆ ಹೈಕಮಾಂಡ್ ಮಾತುಕತೆ ನಡೆಸಿದೆ.
ಹಾಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಅನಂತಕುಮಾರ್, ಪ್ರಹ್ಲಾದ್ ಜೋಶಿ ಹಾಗೂ ಕೆಎಸ್ ಈಶ್ವರಪ್ಪ ನಾಯಕತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದೆ.
ಮತ ಬ್ಯಾಂಕ್ ರಾಜಕೀಯ: ವೀರಶೈವ ಮತ್ತು ಒಕ್ಕಲಿಗ ಸಮುದಾಯದ ಮತಗಳು ಸಾರಾಸಗಟಾಗಿ ಒಂದು ಕಡೆ ವಾಲದಂತೆ ಎಚ್ಚರಿಕೆ ವಹಿಸಬೇಕು. ಇದರರ್ಥ ಲಿಂಗಾಯತರ ಮತಗಳು ಯಡಿಯೂರಪ್ಪ ಅವರೆಡೆಗೆ ಹಾಗೂ ಒಕ್ಕಲಿಗರ ಮತಗಳು ಜೆಡಿಎಸ್ ನತ್ತ ವಾಲಿದರೆ ಪಕ್ಷಕ್ಕೆ ಅಪಾಯ ಎಂಬುದು ಬಿಜೆಪಿ ನಾಯಕರ ಯೋಜನೆ. ಜೊತೆಗೆ ಬ್ರಾಹ್ಮಣ, ಕುರುಬ ಮತಗಳನ್ನು ಒಟ್ಟು ಮಾಡಲು ಯೋಜಿಸಲಾಗಿದೆ. ದಲಿತರು ಹಾಗೂ ಅಲ್ಪ ಸಂಖ್ಯಾತರ ಮತ ಬ್ಯಾಂಕ್ ಕೊಂಚ ಕೈ ಕೊಟ್ಟಿದೆ.
ಯಡಿಯೂರಪ್ಪ ನಡೆಯ ಹಿಂದೆ ಕಾಂಗ್ರೆಸ್ ಪಾತ್ರವಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅವರ ಬಗ್ಗೆ ಸಕಾರಾತ್ಮಕ ಧೋರಣೆ ಅನುಸರಿಸಬೇಕೆ ಅಥವಾ ನಕಾರಾತ್ಮಕ ಧೋರಣೆ ತಳೆಯಬೇಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ವಾಪಸ್ ಪಡೆಯುವ ಅಥವಾ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಗಳನ್ನೂ ಬಿಜೆಪಿ ವರಿಷ್ಠರ ಪೈಕಿ ಕೆಲವರು ಯೋಜಿಸಿದ್ದಾರೆ.












Click it and Unblock the Notifications