ಹೋಂಸ್ಟೇ ದಾಳಿ, ವಿಪ್ರೋ ಉದ್ಯೋಗಿಗಳ ವಶ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿರುವ ದೇವಾಲಯಗಳ ಆಗರ ಕಳಸದಲ್ಲಿರುವ 'ಪ್ರಿನ್ಸ್ ಆಫ್ ಕಳಸ' ಹೋಂಸ್ಟೇನಲ್ಲಿ ವಿಪ್ರೋ ಉದ್ಯೋಗಿಗಳು ಪಾರ್ಟಿ ಮಾಡುತ್ತಿದ್ದರು. ಇಡೀ ರಾತ್ರಿ ಇವರು ನಡೆಸಿದ ಹಾರಾಟ, ಕಿರುಚಾಟ, ಗಟ್ಟಿಯಾಗಿದ್ದ ಹಾಡುಗಳಿಂದ ಸುತ್ತಮುತ್ತಲಿರುವ ಜನರಿಗೆ ತೊಂದರೆಯಾಗಿ, ದೂರು ನೀಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.
ವೀಕೆಂಡ್ ಮಜಾ ಮಾಡಲು ವಿಪ್ರೋ ಉದ್ಯೋಗಿಗಳು ಅಲ್ಲಿ ಸೇರಿದ್ದರು ಎಂದು ತಿಳಿದುಬಂದಿದೆ. ಚಿಕ್ಕಮಗಳೂರಿನಿಂದ 92 ಕಿ.ಮೀ. ದೂರದಲ್ಲಿರುವ ಕಳಸದಲ್ಲಿರುವ ಈ ಹೋಂಸ್ಟೇ ಮಾಲಿಕರ ಮೇಲೆ ಕೂಡ ಪೊಲೀಸರು ಕೇಸನ್ನು ದಾಖಲಿಸಿದ್ದಾರೆ. ಅನುಮತಿ ಇಲ್ಲದಿದ್ದರೂ ವಿಪ್ರೋ ಉದ್ಯೋಗಿಗಳಿಗೆ ಪಾರ್ಟಿ ಮಾಡಲು ಅವಕಾಶ ನೀಡಿದ್ದೇಕೆ ಎಂಬುದು ಪೊಲೀಸರ ಆಕ್ಷೇಪ. ಈ ಪಾರ್ಟಿಯಲ್ಲಿ ಬಳಸಲಾದ ಧ್ವನಿವರ್ಧಕಗಳನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಜುಲೈ 29ರಂದು ಮಂಗಳೂರಿನ ಪಡೀಲ್‌ನಲ್ಲಿರುವ ಮಾರ್ನಿಂಗ್ ಮಿಸ್ಟ್ ಹೋಂಸ್ಟೇ ಮೇಲೆ ಹಿಂದೂ ಜಾಗರಣ ಸಮಿತಿ ಕಾರ್ಯಕರ್ತರು ದಾಳಿ ನಡೆಸಿ ಯುವಕ ಯುವತಿಯರ ಮೇಲೆ ದಾಳಿ ನಡೆಸಿರುವುದು ಇನ್ನೂ ಹಸಿರಾಗಿರುವಾಗಲೇ ನಿಮಯವನ್ನು ಉಲ್ಲಂಘಿಸಿದ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಬಾರಿ ಪೊಲೀಸರೇ ದಾಳಿ ನಡೆಸಿ ವಿಪ್ರೋ ಉದ್ಯೋಗಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಆದರೆ, ವಿಪ್ರೋ ಉದ್ಯೋಗಿಗಳ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ.












Click it and Unblock the Notifications