ಎಫ್ 1 ಟೀಂಗೆ 440 ಕೋಟಿ ರು: ವಿಜಯ್ ಮಲ್ಯ
ಬೆಂಗಳೂರು, ನ.22: ಸಮಸ್ಯೆಗಳ ಮೇಲೆ ಸಮಸ್ಯೆ ಎದುರಾದರೂ ವಿಜಯ್ ಮಲ್ಯ ಮಾತ್ರ ತಮ್ಮ ನೆಚ್ಚಿನ ಫೋರ್ಸ್ ಇಂಡಿಯಾಗೆ ಮಾತ್ರ ಫೋರ್ಸ್ ನೀಡುವುದನ್ನು ನಿಲ್ಲಿಸಿಲ್ಲ.
ಕಿಂಗ್ ಫಿಷರ್, ಯುಬಿ ಸಮೂಹ ಸಾಲದ ಸುಳಿಯಲ್ಲಿ ಸಿಲುಕಿದ್ದರೂ ಫೋರ್ಸ್ ಇಂಡಿಯಾ ಫಾರ್ಮುಲಾ ಒನ್ ತಂಡವನ್ನು ಮಾತ್ರ ಸುಸ್ಥಿತಿಯಲ್ಲಿಡುತ್ತಾ ಬಂದಿದ್ದಾರೆ.

ಫೋರ್ಸ್ ಇಂಡಿಯಾಗೆ ಇನ್ನಷ್ಟು ಶಕ್ತಿ ತುಂಬಲು ಈ ವರ್ಷ 440 ಕೋಟಿ(79.67 ಮಿಲಿಯನ್ ಡಾಲರ್) ಹೂಡಿಕೆ ಮಾಡುವುದಾಗಿ ಫೋರ್ಸ್ ಇಂಡಿಯಾದ ಸಹ ಮಾಲೀಕ ವಿಜಯ್ ಮಲ್ಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಅಬುದಾಬಿ ಗ್ರಾಂಡ್ ಪ್ರಿಕ್ಸ್ ನಂತರ ನಡೆದ ಬೋರ್ಡ್ ಮೀಟಿಂಗ್ ನಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು ಎಂದಿರುವ ಮಲ್ಯ ಬ್ರೆಜಿಲ್ ಗ್ರಾಂಡ್ ಪ್ರಿಕ್ಸ್ ಗೆ ತಯಾರಿ ನಡೆಸಿದ್ದಾರೆ.
ಫೋರ್ಸ್ ಇಂಡಿಯಾ ಸಂಸ್ಥೆಯಲ್ಲಿ ಸಹರಾ ಇಂಡಿಯಾ ಸಹ ಪಾಲುದಾರ ಸಂಸ್ಥೆಯಾಗಿದೆ. ಸಹಾರಾ ಸಂಸ್ಥೆ ಶೇ 42.5 ಪಾಲನ್ನು ಹೊಂದಿದೆ. 2011ರಲ್ಲಿ ಸುಮಾರು 100 ಮಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಿದೆ.
ಫೋರ್ಸ್ ಇಂಡಿಯಾ ಪ್ರಸಕ್ತ ಎಫ್ 1 ಋತುವಿನಲ್ಲಿ 99 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ವಿಲಿಯಮ್ಸ್ ಟೀಂಗಿಂತ 23 ಅಂಕ ಮುಂದಿರುವುದು ಸಾಧನೆ ಎನ್ನಬಹುದು.
ಕಳೆದ ವರ್ಷ ಫೋರ್ಸ್ ಇಂಡಿಯಾ 69 ಅಂಕಗಳೊಂದಿಗೆ 6ನೇ ಸ್ಥಾನ ಗಳಿಸಿತ್ತು. 2007ರಲ್ಲಿ ಸ್ಪೈಕರ್(ಈ ಹಿಂದಿನ ಜೋರ್ಡನ್ ಗ್ರೂಪ್) ಟೀಂ ಖರೀದಿಸಿದ್ದ ಮಲ್ಯರಿಗೆ ಫೋರ್ಸ್ ಇಂಡಿಯಾ ಸಾಧನೆ ಬಗ್ಗೆ ಹೆಮ್ಮೆ ಇದೆ.
ಆದರೆ, ಮಲ್ಯ ಹಾಗೂ ಸಹಾರಾ ಸಮೂಹ ಎರಡಕ್ಕೂ ಟೈಮ್ ಚೆನ್ನಾಗಿಲ್ಲ. ಮಲ್ಯರ ಕಿಂಗ್ ಫಿಷರ್ ನೆಲಕಚ್ಚಿದ್ದರೆ, ಸಹರಾ ಸಂಸ್ಥೆ ತನ್ನ ಹೂಡಿಕೆದಾರರಿಗೆ 4.6 ಬಿಲಿಯನ್ ಡಾಲರ್ ತೆರಬೇಕಾದ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ.
ಭಾರತ ಅತಿ ಶ್ರೀಮಂತರದಲ್ಲಿ ಒಬ್ಬರಾದ ಮಲ್ಯ, ಯುನೈಟೆಡ್ ಸ್ಪಿರೀಟ್ಸ್ ಷೇರುಗಳನ್ನು ಡಿಯಾಜಿಯೋ ಸಂಸ್ಥೆಗೆ 2.1 ಬಿಲಿಯನ್ ಡಾಲರ್ ಮೊತ್ತ ಮಾರಾಟ ಮಾಡಲು ಉತ್ಸುಕರಾಗಿದ್ದಾರೆ.
ಜರ್ಮನ್ ಮೂಲದ ಚಾಲಕ ನಿಕೊ ಹಲ್ಕನ್ಬರ್ಗ್ ಅವರು ಈ ಭಾನುವಾರ ಫೋರ್ಸ್ ಇಂಡಿಯಾ ಪರ ಕೊನೆ ರೇಸ್ ಓಡಿಸಲಿದ್ದಾರೆ.












Click it and Unblock the Notifications