ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ, ಯೂನಿಕೋಡ್‌ಗೆ ಒಪ್ಪಿಗೆ ನೀಡಿದ ಸರಕಾರ

By Prasad
|
Google Oneindia Kannada News

Finally, govt adopts Unicode-Kannada
ಬೆಂಗಳೂರು, ನ. 6 : ಸರಕಾರಿ ಕಚೇರಿಗಳಲ್ಲಿ, ಇ-ಆಡಳಿತದಲ್ಲಿ, ಸರಕಾರಿ ವೆಬ್‌ಸೈಟ್‌ಗಳಲ್ಲಿ ಕನ್ನಡ ಯೂನಿಕೋಡ್ ತಂತ್ರಾಂಶ ಅಭಿವೃದ್ಧಿಪಡಿಸಿ ಅಳವಡಿಸುವ, ಎಬಿವಿಪಿ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಕೇಸುಗಳನ್ನು ವಾಪಸ್ ಪಡೆಯುವ ನಿರ್ಣಯಗಳ ಜೊತೆಗೆ ಹಲವಾರು ಪ್ರಮುಖ ನಿರ್ಣಯಗಳನ್ನು ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರಕಾರ ಮಂಗಳವಾರ ತೆಗೆದುಕೊಂಡಿದೆ.

ಮಹತ್ವದ ನಿರ್ಣಯಗಳು ಕೆಳಗಿನಂತಿವೆ

* ಕನ್ನಡ ಯೂನಿಕೋಡ್ ತಂತ್ರಾಂಶ ಅಭಿವೃದ್ಧಿಪಡಿಸಿ ಸರಕಾರಿ ಕಚೇರಿ, ಇ-ಆಡಳಿತ, ವೆಬ್‌ಸೈಟ್‌ಗಳಲ್ಲಿ ಅಳವಡಿಕೆ.
* ಶಿವಮೊಗ್ಗ, ತುಮಕೂರುಗಳಲ್ಲಿ ಎಬಿವಿಪಿ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಕೇಸ್ ವಾಪಸ್.
* ಬೆಳಗಾವಿ ಜಿಲ್ಲೆಯ ಕಿತ್ತೂರಿಗೆ ತಾಲೂಕು ಸ್ಥಾನಮಾನ.
* 23 ಸಾವಿರ ದಿನಗೂಲಿ ನೌಕರರಿಗೆ ಏಪ್ರಿಲ್ 1, 2012ರಿಂದ ಜಾರಿಗೆ ಬರುವಂತೆ ವೇತನದಲ್ಲಿ 1 ಸಾವಿರ ರು. ಹೆಚ್ಚಳ.
* ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ನೌಕರರಿಗೆ 'ಸರ್ವೋತ್ತಮ ಸೇವಾ' ಪ್ರಶಸ್ತಿ. ಜಿಲ್ಲಾಮಟ್ಟದಲ್ಲಿ 6 ಮತ್ತು ರಾಜ್ಯಮಟ್ಟದಲ್ಲಿ 38 ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿ ಭಾಜಕರಿಗೆ 20ರಿಂದ 40 ಸಾವಿರ ರು. ಬಹುಮಾನ. ಪ್ರತಿವರ್ಷ ಜನವರಿ 26ರಂದು ಪ್ರಶಸ್ತಿ ಪ್ರದಾನ.

ಇತರ ನಿರ್ಣಯಗಳು

* ಕರ್ನಾಟಕ ರಾಜ್ಯ ಬೀಜ ನಿಗಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 30 ಕೋಟಿ ರು. ಸಾಲ ಪಡೆಯಲು ರಾಜ್ಯ ಸರ್ಕಾರ ಖಾತರಿ.
* ಪಶು ಸಂಗೋಪನಾ ಇಲಾಖೆಯಲ್ಲಿನ 642 ಪಶುವೈದ್ಯ ಸಹಾಯಕರ ಹುದ್ದೆಗಳಿಗೆ ನೇರ ನೇಮಕಾತಿ.
* ಬಿಬಿಎಂಪಿ ವ್ಯಾಪ್ತಿಯಡಿ ಬರುವ ಶಾಲೆಗಳ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಉಪಗ್ರಹ ಆಧಾರಿತ ಬಹುಮಾಧ್ಯಮ ಶಿಕ್ಷಣ.
* ಭದ್ರಾವತಿ ರೈಲು ನಿಲ್ದಾಣದ ಬಳಿ ಮೇಲು ಸೇತುವೆ ಹಾಗೂ ಸಂಪರ್ಕ ರಸ್ತೆಯನ್ನು 18.3 ಕೊಟಿ ರು. ವೆಚ್ಚದಲ್ಲಿ ಹಾಗೂ ಶಿವಮೊಗ್ಗ ನಿಲ್ದಾಣದಲ್ಲಿ 16.40 ಕೋಟಿ ರು. ವೆಚ್ಚದಲ್ಲಿ ಮೇಲು ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲು ತೀರ್ಮಾನ.
* ಸಂವಿಧಾನದ 371ನೇ ಪರಿಚ್ಛೇದದ ಅನ್ವಯ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿರುವ ಹಿನ್ನೆಲೆಯಲ್ಲಿ ಉದ್ಯೋಗ ಶಿಕ್ಷಣ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವಂತೆ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನ.
* 2013ನೇ ವರ್ಷದ ಸಾರ್ವತ್ರಿಕ ರಜಾ ದಿನಗಳನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿದೆ.
* ಹಿರಿಯೂರು ತಾಲ್ಲೂಕು ದೇವರಕೊಟ್ಟ ಗ್ರಾಮದಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ಪ್ರಾರಂಭಿಸಲು ಒಪ್ಪಿಗೆ.

ಕನ್ನಡಕ್ಕೆ ಯೂನಿಕೋಡ್ ಶಿಷ್ಟತೆಯನ್ನು ಕಡ್ಡಾಯವೆಂದು ಪ್ರಕಟಿಸಬೇಕು ಹಾಗೂ ಕನ್ನಡದ ಎಲ್ಲ ಕೆಲಸಗಳು ಮತ್ತು ಅಂತರ್ಜಾಲ ತಾಣಗಳ ಯುನಿಕೋಡ್ ನಲ್ಲೇ ಇರಬೇಕೆಂದು ಸುತ್ತೋಲೆ ಹೊರಡಿಸಬೇಕು. ಎಲ್ಲ ಇಲಾಖೆಗಳಲ್ಲಿ ಪದ ಸಂಸ್ಕರಣೆಗೂ ಯುನಿಕೋಡ್ ಶಿಷ್ಟತೆ ಬಳಸಬೇಕು ಮತ್ತು ಮೂಲ ದಾಖಲೆಗಳನ್ನು ಯುನಿಕೋಡ್ ನಲ್ಲಿಯೇ ಸಿದ್ಧಪಡಿಸಬೇಕು ಎಂಬ ಸಲಹೆಗಳನ್ನು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿದಾನಂದ ಗೌಡರು 2010ರಲ್ಲಿಯೇ ಸರಕಾರಕ್ಕೆ ಸಲ್ಲಿಸಿದ್ದರು.

ಕಿತ್ತೂರು ಗ್ರಾಮವನ್ನು 177ನೇ ತಾಲೂಕಾಗಿ ರಾಜ್ಯ ಸಂಪುಟ ನಿರ್ಣಯ ತೆಗೆದುಕೊಂಡ ಸುದ್ದಿ ಹೊರಬೀಳುತ್ತಿದ್ದಂತೆ, ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ಚೆನ್ನಮ್ಮಳ ಊರಿನಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಗ್ರಾಮಸ್ಥರು ಪಟಾಕಿ ಹಾರಿಸಿ ಸಂತೋಷ ವ್ಯಕ್ತಪಡಿಸಿದರು. ಈ ನಿರ್ಣಯಗಳ ಜೊತೆಗೆ ಡಿಸೆಂಬರ್ 5ರಿಂದ 13ರವರೆಗೆ ಬೆಳಗಾವಿಯಲ್ಲಿ ಹೊಸದಾಗಿ ತಲೆಯೆತ್ತಿ ನಿಂತಿರುವ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ನಡೆಸಲು ಸಂಪುಟ ನಿರ್ಧಾರ ಮಾಡಿದೆ.

ಯೂನಿಕೋಡ್ ಮಹತ್ವ : ಬಹುಕಾಲದ ಬೇಡಿಕೆಯಾಗಿದ್ದ ಯೂನಿಕೋಡ್‌ ಅಳವಡಿಕೆಗೆ ಅನುಮತಿ ನೀಡದ್ದರಿಂದ ಸರಕಾರದ ಎಲ್ಲ ಇಲಾಖೆಗಳಲ್ಲಿ ಏಕರೂಪವಾಗಿ ಕನ್ನಡವನ್ನು ಜಾರಿ ಮಾಡಲು ಸಾಧ್ಯವಾಗಿದ್ದಿಲ್ಲ. ಕನ್ನಡ ಅಕ್ಷರಗಳು ಯೂನಿಕೋಡ್ ತಂತ್ರಾಂಶದಲ್ಲಿದ್ದರೆ ಸಾಕು ಇಂಗ್ಲಿಷ್‌ನಂತೆ ಯಾವುದೇ ಆಪರೇಟಿಂಗ್ ಸಿಸ್ಟಂನಲ್ಲಿ ಯಾವುದೇ ತೊಂದರೆಯಿಲ್ಲದೆ ಕನ್ನಡವನ್ನು ಓದಬಹುದು. ಯೂನಿಕೋಡ್ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬೇಕಿದ್ದರೆ ಈ ತಾಣಕ್ಕೆ ಭೇಟಿ ನೀಡಿರಿ.

ಗೌಡರನ್ನು ಅಭಿನಂದಿಸಿ : ಯೂನಿಕೋಡ್ ಬಳಕೆಗಾಗಿ ಕರ್ನಾಟಕ ಸರಕಾರಕ್ಕೆ ಹಲವಾರು ಸಲಹೆಗಳನ್ನು ನೀಡುವುದರ ಜೊತೆಗೆ ಸಾಕಷ್ಟು ಪ್ರಯತ್ನ ನಡೆಸಿದ್ದ ಕುವೆಂಪು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಕೆ. ಚಿದಾನಂದ ಗೌಡ (ಕುವೆಂಪು ಅವರ ಅಳಿಯ) ಅವರ ಹೋರಾಟಕ್ಕೆ ಕೊನೆಗೂ ಯಶಸ್ಸು ಲಭಿಸಿದೆ. ಈ ನಿರ್ಣಯದಿಂದಾಗಿ ಎಲ್ಲ ಸರಕಾರಿ ಕನ್ನಡ ಅಂತರ್ಜಾಲ ತಾಣಗಳಲ್ಲಿ ಕನ್ನಡ ರಾರಾಜಿಸಲಿದೆ. ಕನ್ನಡ ರಾಜ್ಯೋತ್ಸವ ಮಾಸದಲ್ಲಿ ಕನ್ನಡಿಗರಿಗೆ ಇದಕ್ಕಿಂದ ದೊಡ್ಡದಾದ ಕಾಣಿಕೆ ಯಾವುದು ಬೇಕು?

English summary
Karnataka govt has finally adopted Unicode-Kannada as the official language in govt offices, websites, e-governance. The decision was taken at a cabinet meeting held on 6th November. Taluk status to Kittur is among many important decisions taken by Shettar govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X