ಸ್ಯಾಂಡಿ ಡಿಪ್ರೆಶನ್: ಇನ್ಫಿ, ಟಿಸಿಎಸ್, ವಿಪ್ರೋ ಹೈಅಲರ್ಟ್
ಬೆಂಗಳೂರು, ಅ.31: ಅಮೆರಿಕದಲ್ಲಿ Superstorm Sandy ಬಿಟ್ಟರೆ ಬೇರೆ ಸುದ್ದಿಯಿಲ್ಲ. ಅಧ್ಯಕ್ಷ ಚುನಾವಣೆಗಳೂ ಹಿಂದೆ ಸರಿದಿವೆ. ಆದರೆ ಒಬಾಮಾ ಪ್ರತಿಸ್ಪರ್ಧಿ ಮಾತ್ರ ಈ ಅವೇಳೆಯಲ್ಲೂ ಸಂತ್ರಸ್ತರಿಗೆ ನೆರವಾಗುವ ಹೆಸರಿನಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ.
ದೀಪಾವಳಿ ಹಬ್ಬದಲ್ಲಿ ಪಟಾಕಿಗಳು ಸಿಡಿಯುವಂತೆ ನಿನ್ನೆ ಬೆಳಗ್ಗೆ ನ್ಯೂಯಾರ್ಕಿನಲ್ಲಿ 50ಕ್ಕೂ ಹೆಚ್ಚು ವಿದ್ಯುತ್ ಟ್ರಾನ್ಸಫಾರ್ಮರುಗಳು ಸಿಡಿದಿವೆ. ನಾರಾರು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಅಮೆರಿಕ ಮಂದಿ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ನಾವಾದರೂ ಕರೆಂಟ್ ಇಲ್ಲದಿದ್ದರೆ ಬದುಕುಳಿಯುತ್ತೇವೆ. ಆದರೆ ಅಮೆರಿಕ ಮಂದಿಗೆ ವಿದ್ಯುತ್ತಿನದೇ ದೊಡ್ಡ ಸಮಸ್ಯೆ.
ಇಂತಹ ದುರ್ಭರ ಪರಿಸ್ಥಿತಿಯಲ್ಲಿ ಭಾರತೀಯ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋ ಕಂಪನಿಗಳು ತನ್ನ ಟೆಕ್ಕಿಗಳಿಗೆ ಅಲರ್ಟ್ ಘೋಷಿಸಿವೆ. ತನ್ನ ಉದ್ಯೋಗಿಗಳು ಸುರಕ್ಷಿತವಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಈ ಕಂಪನಿಗಳು ಹೇಳಿವೆ.

ಅಮೆರಿಕದಲ್ಲಿ ಉದ್ಯೋಗನಿರತರಾಗಿರುವ ಈ ಕಂಪನಿಗಳ ಉದ್ಯೋಗಿಗಳು ಮುಂಜಾಗ್ರತೆ ವಹಿಸಿದ್ದಾರೆ. ಜಪಾನಿನಲ್ಲಿ ಸುನಾಮಿ ಕಾಣಿಸಿಕೊಂಡಾಗಲೂ ಈ ಕಂಪನಿಗಳು ತನ್ನ ಉದ್ಯೋಗಿಗಳ ಸುರಕ್ಷತೆಯ ವಿಷಯದಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಿದ್ದವು.
Infosys ಏನು ಹೇಳುತ್ತದೆ?: 'ಅಮೆರಿಕಾದ ಪೂರ್ವ ಕರಾವಳಿಯಲ್ಲಿ Superstorm Sandy ತನ್ನ ಭೀಕರ ಪ್ರತಾಪ ತೋರಿದೆ. ಈ ಚಂಡಮಾರುತದ ಸಮ್ಮುಖದಲ್ಲಿ ಕಂಪನಿಯು ತನ್ನ ಉದ್ಯೋಗಿಗಳು ಮತ್ತು ಗ್ರಾಹಕರ ಬಗ್ಗೆ ವಿಶೇಷ ಕಟ್ಟೆಚ್ಚರ ವಹಿಸಿದೆ' ಇನ್ಫಿ ಅಧಿಕೃತವಾಗಿ ಘೋಷಿಸಿದೆ.
'ತುರ್ತು ಪರಿಸ್ಥಿತಿಯಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ನಮ್ಮ ಉದ್ಯೋಗಿಗಳು ಮತ್ತು ಅವರ ಕುಟುಂಬಸ್ಥರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಸತತ ಸಂಪರ್ಕದಲ್ಲೂ ಇದ್ದೇವೆ. ಮುಂಜಾಗ್ರತೆ ಕ್ರಮವಾಗಿ ಒಂದಷ್ಟು ದಿನ ಈ ಭಾಗಗಳಲ್ಲಿ business travel ಮಾಡುವುದನ್ನು ಸ್ಥಗಿತಗೊಳಿಸಿದ್ದೇವೆ. ಸಂತ್ರಸ್ತ ಪ್ರದೇಶಗಳಲ್ಲಿರುವ ನಮ್ಮ ಕಚೇರಿಗಳಿಗೆ ಬೀಗಮುದ್ರೆ ಹಾಕಿದ್ದೇವೆ' ಎಂದೂ ಇನ್ಫೋಸಿಸ್ ತಿಳಿಸಿದೆ.
Wipro ಏನು ಹೇಳುತ್ತದೆ?: ಅಮೆರಿಕದಲ್ಲಿರುವ ನಮ್ಮ ಉದ್ಯೋಗಿಗಳಿಗೆ ಅಧಿಕೃತವಾಗಿ ಈಮೇಲ್ ಮೂಲಕ ಸಂದೇಶ ರವಾನಿಸಿದ್ದೇವೆ. ಕಚೇರಿಗೆ ತೆರಳದೆ ಮನೆಗಳಲ್ಲೇ ಉಳಿದು, ಸ್ಥಳೀಯ ಅಧಿಕಾರಿಗಳು ನೀಡುವ ಮಾರ್ಗಸೂಚಿಗಳನ್ನು ಅನುಸರಿಸುವಂತೆ ನಮ್ಮ ಟೆಕ್ಕಿಗಳಿಗೆ ಹೇಳಿದ್ದೇವೆ. ಅಮೆರಿಕದ ಸಂತ್ರಸ್ತ ಭಾಗಗಳಲ್ಲಿ business travel ಮಾಡದಂತೆ ಆದೇಶಿಸಿದ್ದೇವೆ.
TCS ಏನು ಹೇಳುತ್ತದೆ?: Infosys ಮತ್ತು Wipro ಹಾದಿಯಲ್ಲೇ ಸಾಗಿರುವ ಟಿಸಿಎಸ್, ಮನೆಗಳಲ್ಲಿ ಸುರಕ್ಷಿತವಾಗಿ ಉಳಿಯುವಂತೆ ಕೋರಿದೆ.












Click it and Unblock the Notifications