ವೇಶ್ಯಾವಾಟಿಕೆ : ಬೆಂಗಳೂರಿನ ಯುವತಿ ಸೇರಿ 5 ಬಂಧನ

ವೈನಾಡ್‌ನಲ್ಲಿರುವ ರೆಸಾರ್ಟ್ ಮತ್ತು ಜಿಲ್ಲೆಯ ಅನೇಕ ಹೋಟೆಲುಗಳಿಗೆ ಹುಡುಗಿಯರನ್ನು ಕಳುಹಿಸಲಾಗುತ್ತಿದೆ ಎಂಬ ಸುಳಿವಿನ ಮೇರೆಗೆ ಅರಯಾದತ್ತುಪಳಂನಲ್ಲಿರುವ ರಾಣಿ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿದ ಎಸಿಪಿ ಪ್ರಿನ್ಸ್ ಅಬ್ರಹಾಂ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಪಿ. ಪ್ರೇಮದಾಸ್ ಅವರ ನೇತೃತ್ವದ ತಂಡ, ಇಬ್ಬರು ಮಹಿಳೆಯರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.
ಬಂಧಿತರು : ಅಲ್ಲಾಪುಳದ ಡಿಜೋ ಜೋಸೆಫ್ ಅಲಿಯಾಸ್ ಥಾಮಸ್ ಜೋಸೆಫ್ (28), ವೈನಾಡ್‌ನ ಟಿ.ಬಿ. ಡೆನ್ನಿಸ್ (35), ನೆಲ್ಲಿಕೋಡ್‌ನ ಮೊಹಮ್ಮದ್ ಅಸ್ಲಮ್ (23), ಕೂರಚುಂಡ್‌ನ ರೀನಾ ಜೋಸೆಫ್ (32) ಮತ್ತು ಬೆಂಗಳೂರಿನ ಶ್ವೇತಾ (24). ಇವರಲ್ಲಿ ಶ್ವೇತಾ ಬೆಂಗಳೂರಿನ ಮೂಲದವಳಾಗಿದ್ದರೆ, ಡೆನ್ನಿಸ್ ಬೆಂಗಳೂರಿನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿದ್ದಾನೆ.
ಇವರಲ್ಲಿ ಡಿಜೋ ಮತ್ತು ರೀನಾ ಗಂಡ ಹೆಂಡತಿಯರು ಎಂದು ಹೇಳಿಕೊಂಡು ವಾಸಿಸುತ್ತಿದ್ದರು. ಬೆಂಗಳೂರಿನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿರುವ ಡೆನ್ನಿಸ್ ಹುಡುಗಿಯರನ್ನು ಪುಸಲಾಯಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ. ಬೆಂಗಳೂರಿನ ಶ್ವೇತಾ ಎಲ್ಲ ರಾಜ್ಯಗಳಲ್ಲಿರುವ ವೇಶ್ಯಾವಾಟಿಕೆ ಜಾಲಗಳೊಂದಿಗೆ ಸಂಪರ್ಕವಿಟ್ಟುಕೊಂಡು ರೀನಾಗೆ ಸಹಾಯ ಮಾಡುತ್ತಿದ್ದಳು. ರೀನಾಳೇ ತನ್ನ ಕುಟುಂಬದ ಅನೇಕ ಹುಡುಗಿಯರನ್ನು ವೇಶ್ಯಾವಾಟಿಕಗೆ ತಳ್ಳಿದ್ದಳು.
ಇವರ ಬೃಹತ್ ಜಾಲದ ಸುಳಿವು ಸಿಗುತ್ತಿದ್ದಂತೆ ಜಿಜೋ ಜೋಸ್ ಎಂಬುವವರಿಗೆ ಸೇರಿದ್ದ ಫ್ಲಾಟ್ ಮೇಲೆ ಪೊಲೀಸರು ಬುಧವಾರ ರಾತ್ರಿ ದಾಳಿ ನಡೆಸಿದರು. ಬಂಧಿತನಾಗಿರುವ ಡೆನ್ನಿಸ್ ಎರ್ನಾಕುಲಂ ಬಳಿ ಅಪ್ರಾಪ್ತ ವಯಸ್ಕ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ ಆರೋಪವನ್ನೂ ಎದುರಿಸುತ್ತಿದ್ದಾನೆ. ಆತ ಬೆಂಗಳೂರಿಂದ ಮಾತ್ರವಲ್ಲ ಎರ್ನಾಕುಲಂ ಮತ್ತು ಗುಡಲೂರಿನಿಂದಲೂ ಯುವತಿಯರನ್ನು ಸರಬರಾಜು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಶ್ಯಾವಾಟಿಕೆ ಜಾಲದ ಹಿಂದೆ ಇನ್ನೂ ಅನೇಕರು ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಇವರು ಮತ್ತೆ ಯಾವ್ಯಾವ ಜಾಲದೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಯಾವ್ಯಾವ ರಾಜ್ಯಗಳಿಂದ ಯುವತಿಯರನ್ನು ಸರಬರಾಜು ಮಾಡುತ್ತಿದ್ದರು ಎಂಬುದನ್ನು ತಿಳಿಯಲು ತನಿಖೆ ನಡೆಸಿದ್ದಾರೆ. ಯುವತಿಯರನ್ನು ಸಪ್ಲೈ ಮಾಡುತ್ತಿದ್ದ ರೆಸಾರ್ಟ್ ಮತ್ತು ಹೋಟೆಲುಗಳ ಮಾಲಿಕರನ್ನೂ ಪೊಲೀಸರು ವಿಚಾರಣೆಗೆ ಗುರಿಪಡಿಸುತ್ತಿದ್ದಾರೆ.












Click it and Unblock the Notifications