ಸಂಬಳದ ಭರವಸೆ : ಕಿಂಗ್ ಫಿಷರ್ ಬಿಕ್ಕಟ್ಟು ಅಂತ್ಯ

"ಈ ಗುರುವಾರದಿಂದಲೇ ಪೈಲಟ್‌ಗಳು ಮತ್ತು ಇಂಜಿನಿಯರುಗಳು ಸೇರಿ ಎಲ್ಲ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗಲಿದ್ದಾರೆ. ನಾವು ಇನ್ನು ಮುಂದೆ ಒಟ್ಟಾಗಿಯೇ ಕೆಲಸ ಮಾಡಲಿದ್ದೇವೆ" ಎಂದು ಏರ್‌ಲೈನ್ ಕಂಪನಿಯ ಸಿಇಓ ಸಂಜಯ್ ಅಗರವಾಲ್ ಅವರು, ಮುಷ್ಕರಕ್ಕೆ ಕುಳಿತಿರುವ ಪೈಲಟ್ ಮತ್ತು ಇಂಜಿನಿಯರುಗಳೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರಿಗೆ ದೆಹಲಿ ಏರ್ಪೋರ್ಟಲ್ಲಿ ತಿಳಿಸಿದರು.
ಮುಷ್ಕರಕ್ಕೆ ಕುಳಿತಿರುವ ಇಂಜಿನಿಯರುಗಳ ಪ್ರತಿನಿಧಿ ಸುಭಾಶ್ ಚಂದ್ರ ಮಿಶ್ರಾ ಅವರು, "ನಾಲ್ಕು ತಿಂಗಳ ಸಂಬಳ ನೀಡುತ್ತೇವೆಂಬ ಕಂಪನಿಯ ಪ್ರಸ್ತಾವನೆಯನ್ನು ನಾವೆಲ್ಲ ಒಪ್ಪಿದ್ದು ತಕ್ಷಣದಿಂದಲೇ ಕೆಲಸಕ್ಕೆ ಹಾಜರಾಗುತ್ತೇವೆ" ಎಂದು ಹೇಳಿದ್ದಾರೆ. ಕೇವಲ ಮೂರು ತಿಂಗಳ ಸಂಬಳ ಮಾತ್ರ ನೀಡುವುದಾಗಿ ಕಿಂಗ್‌ಫಿಷರ್ ಹೇಳುತ್ತಿತ್ತು. ಆದರೆ, ಮುಷ್ಕರ ನಿರತ ನೌಕರರ ಒತ್ತಾಯಕ್ಕೆ ಮಣಿದು ಬಾಕಿ ಇರುವ ಏಳರಲ್ಲಿ ನಾಲ್ಕು ತಿಂಗಳ ಸಂಬಳ ನೀಡಲು ಒಪ್ಪಿದೆ.
ಮಾರ್ಚ್ ತಿಂಗಳ ಸಂಬಳ 24 ಗಂಟೆಗಳಲ್ಲಿ ನೀಡಲಾಗುವುದು. ಏಪ್ರಿಲ್ ಸಂಬಳ ಅಕ್ಟೋಬರ್ 31ರೊಳಗೆ, ಮೇ ತಿಂಗಳ ಸಂಬಳ ದೀಪಾವಳಿಯೊಳಗೆ ಮತ್ತು ಜೂನ್ ತಿಂಗಳ ಸಂಬಳ ಹೊಸ ವರ್ಷದ ಹೊನಲು ಹರಿಯುವುದರೊಳಗಾಗಿ ನೀಡಬೇಕೆಂದು ಒಪ್ಪಂದವಾಗಿದೆ. ಜುಲೈನಿಂದ ಸೆಪ್ಟೆಂಬರ್ ತಿಂಗಳ ಸಂಬಳಗಳು, ವಿಮಾನಗಳು ಆಕಾಶದಲ್ಲಿ ಮತ್ತೆ ಹಾರಾಡಲು ಶುರು ಮಾಡಿ ಹಣಕಾಸು ಸ್ಥಿತಿ ಉತ್ತಮವಾದ ನಂತರ, ಮುಂದಿನ ವರ್ಷದ ಮಾರ್ಚ್ ತಿಂಗಳೊಳಗೆ ನೀಡಬೇಕೆಂದೂ ಅಂಗೀಕಾರವಾಗಿದೆ.
ನೌಕರರು ಮರಳಿ ಕೆಲಸಕ್ಕೆ ಬಂದರೂ, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಕಿಂಗ್ ಫಿಷರ್ ಲೈಸೆನ್ಸನ್ನು ರದ್ದು ಮಾಡಿರುವುದರಿಂದ ವಿಮಾನಗಳು ತಕ್ಷಣಕ್ಕೆ ಹಾರಡಲಾರವು. ಕಂಪನಿಯ ಹಣಕಾಸು ಸ್ಥಿತಿ ಮತ್ತು ಸುರಕ್ಷತೆಯ ಪರಿಶೀಲನೆ ನಡೆಸಿ, ಎಲ್ಲವೂ ಸರಿಯಾಗಿದೆ ಎಂದು ಜಿಡಿಸಿಎಗೆ ಮನವರಿಕೆಯಾದರೆ ಮಾತ್ರ ವಿಮಾನಗಳು ಮತ್ತೆ ರೆಕ್ಕೆ ಬಿಚ್ಚಲಿವೆ. ಆದರೆ, ಇದು ಸಾಧ್ಯವಾಗಲು ಇನ್ನೂ ನಾಲ್ಕು ವಾರಗಳು ಬೇಕು. ಸದ್ಯಕ್ಕಂತೂ ಕತ್ತಲಲ್ಲಿದ್ದ ನೌಕರರ ಬದುಕಲ್ಲಿ ದೀಪಾವಳಿಯ ಬೆಳಕು ಬಂದಂತಾಗಿದೆ.












Click it and Unblock the Notifications