ಇನ್ಫೋಸಿಸ್ ಸಂಸ್ಥೆ ಬ್ಯಾಂಕಲ್ಲಿ ಎಷ್ಟು ರೊಕ್ಕ ಇಟ್ಟಿದೆ!

ಕಳೆದ ಮೂರು ವರ್ಷಗಳಲ್ಲೇ ಅಧಿಕ ಮೊತ್ತ(ಸುಮಾರು 4,986 ಕೋಟಿ ರು) ವನ್ನು ಹೂಡಿಕೆ ಮಾಡಿದೆ. ಜೂನ್ ತ್ರೈಮಾಸಿಕದಲ್ಲಿ ಈ ಮೊತ್ತ 2,161 ಕೋಟಿ ರು ದಾಟಿರಲಿಲ್ಲ.
ಸೆಪ್ಟೆಂಬರ್ 30,2012ಕ್ಕೆ ಅನ್ವಯವಾಗುವಂತೆ ಇನ್ಫೋಸಿಸ್ ನ ಬ್ಯಾಂಕ್ ಠೇವಣಿ ಮೊತ್ತ 14,569 ಕೋಟಿ ರು ನಷ್ಟಿದೆ. ಇತ್ತೀಚೆಗೆ ಬಿಡುಗಡೆ ಮಾಡಿದ ತ್ರೈಮಾಸಿಕದ ವಿತ್ತೀಯ ದಾಖಲೆ ಪ್ರಕಾರ ಜೂನ್ ಅಂತ್ಯ 15,267 ಕೋಟಿ ರು ಇದ್ದದ್ದು ಕೊಂಚ ಇಳಿಕೆಯಾಗಿ 14,569 ಕೋಟಿ ರು ಗೆ ನಿಂತಿದೆ.
ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳು ಲಿಕ್ವಿಡ್ ಮ್ಯೂಚುವಲ್ ಫಂಡ್ ಗಳನ್ನು ಬಳಸಿ ಕಡಿಮೆ ಅವಧಿಯ ಹೂಡಿಕೆ ಮಾಡಿ ಹೆಚ್ಚಿನ ಗಳಿಕೆ ಪಡೆಯುತ್ತಿದ್ದಾರೆ. ಈ ಮೊತ್ತವನ್ನು ಮುಂದಿನ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಈ ಕಾರ್ಯವಿಧಾನ ಇನ್ಫೋಸಿಸ್ ಸಂಸ್ಥೆ ಮಟ್ಟಿಗಂತೂ ಸಫಲವಾಗಿದೆ.
ಸಾಲ ರಹಿತ ಸಂಸ್ಥೆ : ಲಿಕ್ವಿಡ್ ಮ್ಯೂಚುವಲ್ ಫಂಡ್ ಗಳಲ್ಲಿ ಸುಮಾರು 5,000 ಕೋಟಿ ರು ಗೂ ಅಧಿಕ ಹೂಡಿಕೆ ಮಾಡುವ ಮೂಲಕ ಇನ್ಫೋಸಿಸ್ ಸಂಸ್ಥೆ ಸುಮಾರು 11 ತ್ರೈಮಾಸಿಕಗಳಲ್ಲಿ ಸಾಲ ರಹಿತ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಡಿಸೆಂಬರ್ 2009ರಲ್ಲಿ ಸುಮಾರು 5,200 ಕೋಟಿ ರು ಹೂಡಿಕೆ ಮಾಡಿದ್ದ ಇನ್ಫೋಸಿಸ್ ಆದಷ್ಟು ಅದೇ ಮೊತ್ತವನ್ನು ಪ್ರತಿ ತ್ರೈಮಾಸಿಕದಲ್ಲೂ ಉಳಿಸಿಕೊಳ್ಳಲು ಯತ್ನಿಸುತ್ತಿದೆ.
ಇದಲ್ಲದೆ, ಇನ್ಫೋಸಿಸ್ ಸಂಸ್ಥೆ ಸದ್ಯಕ್ಕೆ 2,000 ಕೋಟಿ ರು ಮೊತ್ತ ಭಾರಿ ಡೀಲ್ ನಡೆಸುತ್ತಿದ್ದು ಲೋಡೆಸ್ಟೋನ್ ಸಂಸ್ಥೆ ಖರೀದಿ ಬಹುತೇಕ ಮುಂದಿನ ವಾರ ಮುಕ್ತಾಯವಾಗುವ ಸಾಧ್ಯತೆಯಿದೆ.
ಕಳೆದ ತ್ರೈಮಾಸಿಕದಲ್ಲಿ ಒಟ್ಟಾರೆ ಐಟಿ ಸಂಸ್ಥೆಗಳ ಮ್ಯೂಚುವಲ್ ಫಂಡ್ ಹೂಡಿಕೆ ಮೊತ್ತ 22,570 ಕೋಟಿ ರು ದಾಟಿದೆ. ಇನ್ಫೋಸಿಸ್ ಸಂಸ್ಥೆಯಂತೂ ಡಾಲರ್ vs ರುಪಾಯಿ ಸಮರದ ನಡುವೆ ಅಲ್ಲೂ ಇಲ್ಲೂ ಸರಿ ಸಮವಾಗಿ ಸರಿದೂಗಿಸುತ್ತಿದೆ.
2012-13ನೇ ಸಾಲಿನ 2ನೇ ತ್ರೈಮಾಸಿಕದಲ್ಲಿ ಶೇ 3.4ರಂತೆ 2,369 ಕೋಟಿ ರು.ನಷ್ಟು ನಿವ್ವಳ ಲಾಭ ಬಂದಿದೆ. ಸಂಸ್ಥೆಯ ಆದಾಯ ಶೇ 2.5ರಷ್ಟು ಏರಿಕೆ ಕಂಡು 9,858 ಕೋಟಿ ರು ಗಳಿಸಿದೆ.
ಆದರೆ, Year-on-Year ನಲ್ಲಿ 7.343 ಬಿಲಿಯನ್ ಡಾಲರ್ ಆದಾಯ ನಿರೀಕ್ಷೆ ಹೊತ್ತಿದ್ದ ಇನ್ಫೋಸಿಸ್ Q2 ತ್ರೈಮಾಸಿಕ ವರದಿ ಹೂಡಿಕೆದಾರರಿಗೆ ನಿರಾಶೆ ಮೂಡಿಸಿತ್ತು.












Click it and Unblock the Notifications