ಕಾವೇರಿಗಾಗಿ ಗಳಗಳನೆ ಅತ್ತ ದೇವೇಗೌಡ

ಲೋಕಸಭೆಯ ಅಧಿವೇಶನದ ಸಮಯವೆಲ್ಲ ಹಾಳಾದ್ದರಿಂದ ತಮಿಳುನಾಡಿಗೆ ನೀರು ನೀಡದಿರುವ ರಾಜ್ಯದ ಪರಿಸ್ಥಿತಿಯ ಬಗ್ಗೆ ಸದನದಲ್ಲಿ ಚರ್ಚೆ ನಡೆಯದಿರುವ ಬಗ್ಗೆ ವಿಷಾದವಿದೆ. ಆದರೆ, ಇದರ ಬಗ್ಗೆ ಪ್ರಧಾನಿಯ ಗಮನಕ್ಕೆ ತಂದಿದ್ದೇನೆ. ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ, ಕಾನೂನಿಗೆ ರಾಜ್ಯದ ಜನರು ಬೆಲೆ ಕೊಡುತ್ತಿಲ್ಲ ಎಂದು ತಪ್ಪು ಅಭಿಪ್ರಾಯ ನೀಡಲಾಗುತ್ತಿದೆ. ಇದು ಸರಿಯಲ್ಲ. ಸುಪ್ರೀಂ ಕೋರ್ಟ್ ರಾಜ್ಯಕ್ಕೆ ಅನ್ಯಾಯ ಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ದೇವೇಗೌಡರು ಹೇಳಿದ್ದಾರೆ.
ಆದರೆ, ಸುಪ್ರೀಂ ಕೋರ್ಟಿನ ಆದೇಶದಂತೆ ಮೊದಲ ಮೂರು ದಿನ ಷರತ್ತುಬದ್ಧವಾಗಿ ತಮಿಳುನಾಡಿಗೆ ಕೃಷ್ಣರಾಜ ಸಾಗರದಿಂದ ನೀರು ಬಿಡಬೇಕು. ಅಷ್ಟರಲ್ಲಿ ಮೇಲ್ಮನವಿ ಸಲ್ಲಿಸಬೇಕು. ಕರ್ನಾಟಕಕ್ಕೆ ಮತ್ತು ತಮಿಳುನಾಡಿಗೆ ಸುಪ್ರೀಂ ಕೋರ್ಟ್ ವೀಕ್ಷಕರನ್ನು ಕಳುಹಿಸಬೇಕು. ವೀಕ್ಷಕರು ನಿಷ್ಪಕ್ಷಪಾತವಾಗಿ ಅಧ್ಯಯನ ನಡೆಸಿ ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಬೇಕು. ಆಗ ಮಾತ್ರ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ನಿಲ್ಲಲು ಸಾಧ್ಯ ಎಂದು ದೇವೇಗೌಡ ಅವರು ಅಭಿಪ್ರಾಯ ಮಂಡಿಸಿದ್ದಾರೆ.
ಎಂಥ ತ್ಯಾಗಕ್ಕೂ ಸಿದ್ಧ : ಕರ್ನಾಟಕದಲ್ಲಿ ಕಾವೇರಿ ಕಾವು ಕ್ಷಣಕ್ಷಣಕ್ಕೆ ಏರುತ್ತಿದೆ. ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪುರಸಭೆಯಿಂದ ರಾಜಭವನದವರೆಗೆ ಮೆರವಣಿಗೆಯನ್ನು ತೆಗೆದುಕೊಂಡು ಹೋಗಿ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು. ತಮಿಳುನಾಡಿಗೆ ನೀರು ಬಿಟ್ಟಿದ್ದೇ ಆದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಬೆದರಿಕೆ ಒಡ್ಡಿದರು. ಕಾವೇರಿಗಾಗಿ ಎಂಥ ಹೋರಾಟಕ್ಕೆ ಮತ್ತು ತ್ಯಾಗಕ್ಕೆ ಸಿದ್ಧ ಎಂಬ ಸಂದೇಶವನ್ನು ರವಾನಿಸಿದ್ದಾರೆ.












Click it and Unblock the Notifications