ತ.ನಾಡಿಗೆ ಕಾವೇರಿ ಹರಿದರೆ ಕೆಆರ್‌ಎಸ್ ಮುತ್ತಿಗೆ!

Farmers decide to storm KRS
ಬೆಂಗಳೂರು, ಸೆ. 29 : ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ ಒಂದು ತೊಟ್ಟು ನೀರನ್ನೂ ಬಿಡಲು ಅವಕಾಶ ಮಾಡಿಕೊಡುವುದಿಲ್ಲ. ಒಂದು ವೇಳೆ ಸರಕಾರವೇನಾದರೂ ಸುಪ್ರೀಂ ಕೋರ್ಟ್ ಅಣತಿಯಂತೆ ನೀರು ಬಿಡಲು ಮುಂದಾದರೆ ಕೆಆರ್‌ಎಸ್ ಮುತ್ತಿಗೆ ಹಾಕುವುದಾಗಿ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ. ಮಾದೇಗೌಡ ಅವರು ಎಚ್ಚರಿಕೆ ನೀಡಿದ್ದಾರೆ.

ಸರ್ವಪಕ್ಷಗಳ ಸಭೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಸದ್ಯಕ್ಕೆ ನೀರು ಬಿಟ್ಟು, ಇನ್ನೊಂದು ವಾರದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ರಾಜ್ಯ ಸರಕಾರ ನಿರ್ಣಯ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಮಂಡ್ಯದಲ್ಲಿ ಕಾವೇರಿ ಹಿತರಕ್ಷಣಾ ಸಮಿತಿ ಸದಸ್ಯರ ಸಭೆ ಮುಗಿದು, ಮೇಲಿನ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಕನ್ನಂಬಾಡಿ ಕಟ್ಟೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಾವೇರಿಯನ್ನೇ ನಂಬಿರುವ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿಯೂ ಹಳ್ಳಿಹಳ್ಳಿಗಳಲ್ಲಿ ಪೊಲೀಸರು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಗಸ್ತು ತಿರುಗುತ್ತಿದ್ದಾರೆ. ಮಂಡ್ಯದಲ್ಲಿ ರೈತರೆಲ್ಲ ತಮ್ಮ ಕೆಲಸಗಳನ್ನೆಲ್ಲ ಬದಿಗಿಟ್ಟು ಕಾವೇರಿಯನ್ನು ಉಳಿಸಿಕೊಳ್ಳಲು ಹೋರಾಟಕ್ಕೆ ಇಳಿದಿದ್ದಾರೆ.

ಜಲ ಸತ್ಯಾಗ್ರಹ : ಟಿ.ನರಸೀಪುರದ ತ್ರಿಕೋನ ಸಂಗಮದಲ್ಲಿ, ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ನಿಲ್ಲಿಸುವವರೆಗೆ ನೀರಿನಿಂದ ಮೇಲೇಳುವುದಿಲ್ಲ ಎಂದು ಕೆಲ ರೈತರು ಜಲ ಸತ್ಯಾಗ್ರಹ ಆರಂಭಿಸಿದ್ದಾರೆ. ಮಂಡ್ಯದಲ್ಲಿ ರೈತರೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಾಹುತಿಗೆ ಯತ್ನಿಸಿದ ಘಟನೆ ನಡೆಯಿತು. ಆದರೆ, ಜೊತೆಗಿದ್ದವರ ಸಮಯಸ್ಫೂರ್ತಿಯಿಂದಾಗಿ ಆತ್ಮಾಹುತಿಗೆ ಯತ್ನಿಸಿದವರ ಪ್ರಾಣ ಉಳಿಯಿತು.

ಕಾವೇರಿಗಾಗಿ ನಡೆಯುತ್ತಿರುವ ಹೋರಾಟದಿಂದಾಗಿ ದಸರಾ ಉತ್ಸವದ ಮೇಲೆ ಕರಿನೆರಳು ಬಿದ್ದಂತಾಗಿದೆ. ದಸರಾ ಉತ್ಸವ ಹೆಚ್ಚೋ, ಕಾವೇರಿ ನೀರು ಹೆಚ್ಚೋ ಎಂದು ರೈತರು ಕೇಳುತ್ತಿದ್ದಾರೆ. ನೀರು ಬಿಟ್ಟಿದ್ದೇ ಆದಲ್ಲಿ ರೈತರು ಭಾರೀ ಪ್ರಮಾಣದಲ್ಲಿ ದಂಗೆಯೇಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ನಡುವೆ, ಬೆಂಗಳೂರು-ಮೈಸೂರು ರಸ್ತೆಯುದ್ದಕ್ಕೂ ಅನೇಕ ಪ್ರತಿಭಟನೆಗಳು ನಡೆಯುತ್ತಿದ್ದು, ಬಸ್ ಮತ್ತು ರೈಲುಗಳು ಸರಿಯಾದ ಸಮಯಕ್ಕೆ ತಲುಪಬೇಕಾದ ಸ್ಥಳ ತಲುಪುತ್ತಿಲ್ಲ. ಮದ್ದೂರಿನಲ್ಲಿ ಕೂಡ ತಮಿಳರಿಂದ ರಸ್ತೆ ತಡೆ ನಡೆಸಿದ ಘಟನೆ ನಡೆದಿದೆ.

ಗುಂಡಿಟ್ಟು ಕೊಂದರೂ ಚಿಂತೆಯಿಲ್ಲ : ರೈತ ಮುಖಂಡ ನಂಜುಂಡೇಗೌಡ ಅವರು, ಪೊಲೀಸರು ನಮ್ಮನ್ನು ಗುಂಡಿಟ್ಟು ಕೊಂದರೂ ಚಿಂತೆಯಿಲ್ಲ, ಕಾವೇರಿಯಲ್ಲಿ ರಕ್ತ ಹರಿದರೂ ಚಿಂತೆಯಿಲ್ಲ, ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲು ಮಾತ್ರ ಅವಕಾಶ ಮಾಡಿಕೊಡುವುದಿಲ್ಲ ಎಂದು ಆಕ್ರೋಶಭರಿತ ಮಾತುಗಳನ್ನು ಆಡಿದ್ದಾರೆ. ರಾಜ್ಯದ ಅನೇಕ ಪ್ರದೇಶಗಳಲ್ಲಿ ರೈತರು ಕೇಂದ್ರದ ಪ್ರತಿಕೃತಿ ಮತ್ತು ಟೈರು ಟ್ಯೂಬುಗಳನ್ನು ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಗೆ ಚಕ್ಕರ್ ಹೋರಾಟಕ್ಕೆ ಹಾಜರ್ : ಕಾವೇರಿ ಹೋರಾಟಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಅನೇಕ ಶಾಲಾ ಕಾಲೇಜು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಚಕ್ಕರ್ ಹಾಕಿ ಬೀದಿಗಿಳಿದಿದ್ದಾರೆ. ಇದು ಬೆಂಗಳೂರಿಗೂ ವಿಸ್ತರಿಸುವ ಸಾಧ್ಯತೆಯಿದೆ. ಇದು ಪರೀಕ್ಷಾ ಸಮಯವಾಗಿದ್ದು, ವಿದ್ಯಾರ್ಥಿಗಳ ಅಧ್ಯಯನಕ್ಕೆ ಮತ್ತು ಶಾಲಾ ಕಾಲೇಜುಗಳ ಪಾಠಗಳಿಗೆ ಪೆಟ್ಟುಬೀಳುವ ಸಾಧ್ಯತೆಯೂ ಇದೆ. [ಗಳಗಳನೆ ಅತ್ತ ದೇವೇಗೌಡ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+