ದುಬೈ: ರಸ್ತೇಲಿ ಸುಸ್ಸು ಮಾಡಿದ್ರೆ ಏನ್ಮಾಡ್ತಾರೆ ಗೊತ್ತಾ?

ಸರಿ ಹೀಗೆ ತಪ್ಪು ಮಾಡಿದವರಿಗೆ ಸೂಕ್ತ ಶಿಕ್ಷೆ ವಿಧಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದ 42 ಮಂದಿಗೆ ದುಬೈ ನಗರಸಭೆ ದಂಡ ವಿಧಿಸಿ, ಕೈತೊಳೆದುಕೊಂಡಿದೆ. ನಗ ಬೇಡ್ರೀ. ಇದು ನಿಜ್ಜಾ. ಮತ್ಯಾರೋ ... ಬನ್ನಿ ನಮ್ಮೂರಿಗೆ... ತೋರಿಸ್ತೀವಿ... ಗಂಡು ಗೋವಿಗಳು ಹೇಗೆ ರಸ್ತೇಲೆ ನಿಂತಿರ್ತಾವೆ ಅಂತ ಅಂತ್ಲೂ ಹೇಳುತ್ತಿರುವುದು ಕಿವಿಗೆ ಬೀಳುತ್ತಿದೆ.
ಬರೀ ನಗರಸಭೆ ಅಧಿಕಾರಿಗಳಷ್ಟೇ ಅಲ್ಲ ಸ್ಥಳೀಯ ನಿವಾಸಿಗಳು ಹೀಗೆ ಅಶಿಸ್ತು ಪ್ರದರ್ಶಿಸುವ ಮಂದಿಗೆ ನಿಂತಲ್ಲೇ ದಂಡ ವಿಧಿಸುವ ಅಧಿಕಾರವನ್ನೂ ನೀಡಿದೆ. ಈ ರೀತಿ ರಸ್ತೇಲಿ ಏನೇನೋ ಮಾಡೋರನ್ನು ಕಾಯಲು 700 ಮಂದಿ ನಾಗರಿಕರ ಕೈಗೆ ದಂಡ ನೀಡಲಾಗಿದೆ. ಉಗುಳುವುದು, ಕಾರುಗಳಲ್ಲಿ ಹೋಗುತ್ತಾ ಬೇಡವಾದ್ದನ್ನೆಲ್ಲ ಎಸೆಯುವುದು, ಸುಂದರವಾದ ಊರಿನ ಅಂದ ಕೆಡಿಸುವುದು ಹೀಗೆ ಏನೇನೋ ಮಾಡಿದರೆ ದಂಡ ವಿಧಿಸುವುದು ಗ್ಯಾರೆಂಟಿ.
ಕಳೆದ ಜೂನಿನವರೆಗೆ ಮೇಲಿನ ಮಹಾಪರಾಧಗಳ ಜತೆಗೆ ಸಿಗರೇಟ್ ತುಂಡು ಎಸೆಯುವುದಕ್ಕೂ ಗರಂ ಆಗಿರುವ ನಗರಾಡಳಿತವು ಒಟ್ಟು 3,270 ಮಂದಿಗೆ ದಂಡ ವಿಧಿಸಿದೆ. ಇನ್ನು ನಿರ್ಬಂಧಿತ ಸ್ಥಳಗಳಲ್ಲಿ ವಾಹನಗಳನ್ನು ತೊಳೆಯುವುದು, ಜರ್ದಾ ಉಗಿಯುವುದು ಇವೇ ಮುಂತಾದ ಅಪರಾಧಗಳಿಗೂ ಶಿಕ್ಷೆ ವಿಧಿಸಲಾಗಿದೆ. ರಸ್ತೆಯಲ್ಲಿ ಉಗುಳುವುದು ಇಲ್ಲಿ ದೊಡ್ಡ ಅಪರಾಧ.
ಇಷ್ಟೆಲ್ಲ ದಂಡ ವಿಧಿಸುವ ಕಾರ್ಯಕ್ರಮಗಳು ಇದ್ಯಾಗೂ ಈ ಮಹಾಪರಾಧಗಳು ನಡೆಯುತ್ತವಾ ಎಂದು ಹುಬ್ಬೇರಿಸಬೇಡಿ. ಏಕೆಂದರೆ ದಂಡ ವಿಧಿಸುವ ಅಧಿಕಾರವನ್ನು ಹೆಚ್ಚು ಹೆಚ್ಚು ಮಂದಿಗೆ ನೀಡುತ್ತಿದ್ದ ಹಾಗೆ ಈ ಅಪರಾಧ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿಗೆ ಬೀಳುತ್ತಿವೆ ಎಂಬುದು ದುಬೈ ನಗರದ ಪ್ರಥಮ ಪ್ರಜೆಯ ಅನಿಸಿಕೆ.
ಇನ್ನೊಂದು ಗಮನಾರ್ಹ ವಿಷಯವೆಂದರೆ ಅನೇಕ ತಪ್ಪಿತಸ್ಥರಿಗೆ ತಮ್ಮ ಘನ ಕಾರ್ಯಗಳೆಲ್ಲ ದಂಡನಾರ್ಹ ಎಂಬುದು ತಿಳಿದಿಲ್ಲ. ಹಾಗಾಗಿ ಜಾಗೃತಿ ಕಾರ್ಯಕ್ರಮಗಳನ್ನೂ ಹೆಚ್ಚಾಗಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications