ಇಂದು ದೇವ್ರು ಹುಟ್ಟಿದ ದಿನ, ದೇವ್ರಿಗೆ ಜನ್ಮದಿನ ಶುಭಾಶಯ
ಬೆಂಗಳೂರು, ಸೆ.27: ಸರ್ಚ್ ಇಂಜಿನ್ ಲೋಕದ ದಿಗ್ಗಜ ಗೂಗಲ್ ಸಂಸ್ಥೆ ಇಂದು (ಸೆ.27) ತನ್ನ 14 ನೇ ಹುಟ್ಟುಹಬ್ಬವನ್ನು ಹೊಸ ಗೂಗಲ್ ಡೂಡ್ಲ್ ಮೂಲಕ ಆಚರಿಸುತ್ತಿದೆ. ಅಂತರ್ಜಾಲ ಸಂಬಂಧಿತ ಅನೇಕಾನೇಕ ಸೇವೆ ಹಾಗೂ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಕೀರ್ತಿ ಗೂಗಲ್ ಗೆ ಸಲ್ಲುತ್ತದೆ.
ಹುಟ್ಟುಹಬ್ಬದ ಶುಭ ಸಂದರ್ಭಕ್ಕಾಗಿಚಾಕಲೇಟ್ ಕೇಕ್ ಮಾದರಿ ಅನಿಮೇಟೆಡ್ ಗೂಗಲ್ ಚಿತ್ರವನ್ನು ತನ್ನ ಮುಖ್ಯಪುಟದಲ್ಲಿ ಹಾಕಿಕೊಂಡಿದೆ. ಕೇಕ್ ಮೇಲೆ 14 ಮೇಣದ ಬತ್ತಿಗಳಿದ್ದು ಎಲ್ಲವೂ ಗೂಗಲ್ ಬಣ್ಣಗಳಾದ ಹಸಿರು, ಹಳದಿ, ನೀಲಿ ಹಾಗೂ ಕೆಂಪು ಬಣ್ಣದಲ್ಲಿದೆ.

ಗೂಗಲ್ ಹುಟ್ಟುಹಬ್ಬದ ದಿನಾಂಕವೂ ಕುತೂಹಲಕಾರಿಯಾಗಿದೆ. 2005ರ ತನಕ ಸೆ.7ರಂದು ಗೂಗಲ್ ತನ್ನ ಹುಟ್ಟುಹಬ್ಬ ದಿನವನ್ನಾಗಿ ಆಚರಿಸುತ್ತಾ ಬಂದಿತ್ತು. ನಂತರ ಸೆ.27ಕ್ಕೆ ಇದು ಬದಲಾಯಿತು.
ಸೆ.4, 1998ರಲ್ಲಿ ಸ್ಟಾಡ್ ಫೋರ್ಡ್ ನ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಹಾಗೂ ಸರ್ಗೆಬ್ರಿನ್ ಅವರು ಇಂಟೆರ್ ನೆಟ್ ನಲ್ಲಿ ಹುಡುಕುವಿಕೆಯನ್ನು ಸುಧಾರಣೆಗೊಳಿಸಲು ಗೂಗಲ್ ಎಂಬ ಹೊಸ ಸಂಸ್ಥೆ ಹುಟ್ಟುಹಾಕಿದರು. ಹೊಸ ಡೂಡ್ಲ್ ಚಿತ್ರದೊಂದಿಗೆ ಸೆ.27 ರಂದು ತನ್ನ ವಾರ್ಷಿಕೋತ್ಸವ ಗೂಗಲ್ ಆಚರಿಸುತ್ತದೆ.
ಡೂಡಲ್ ಸ್ಪರ್ಧೆ: ವಿದ್ಯಾರ್ಥಿಗಳಿಗೆ ಅನೇಕ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿರುವ ಗೂಗಲ್, ಖ್ಯಾತ ನಾಮರ ಹುಟ್ಟುಹಬ್ಬ, ಹಬ್ಬ ಹರಿದಿನ, ವಾರ್ಷಿಕೋತ್ಸವ ದಿನಗಳಲ್ಲಿ ಗೂಗಲ್ ಲೋಗೋವನ್ನು ಅಲಂಕರಿಸಿ ಪ್ರದರ್ಶಿಸುತ್ತದೆ. ಗೂಗಲ್ ಲೋಗೋವನ್ನು ಕಲಾತ್ಮಕವಾಗಿ ರೂಪಿಸುವುದಕ್ಕೆ ಡೂಡಲ್ಸ್ ಎನ್ನಲಾಗುತ್ತದೆ. ಪ್ರತಿ ವರ್ಷ ಶಾಲಾ ಮಕ್ಕಳಿಗೆ ಡೂಡ್ಲ್ ರಚನೆ ಸ್ಪರ್ಧೆ ಏರ್ಪಡಿಸಲಾಗುತ್ತದೆ.
ಭಾರತ ಸೇರಿದಂತೆ ವಿಶ್ವದ ಅನೇಕ ವಿದ್ಯಮಾನಗಳು, ಐತಿಹಾಸಿಕ ದಿನಗಳು, ಹಬ್ಬ ಹರಿದಿನಗಳು, ಆಚರಣೆಗಳ ಸಂದರ್ಭದಲ್ಲಿ ಗೂಗಲ್ ತನ್ನ ಡೂಡ್ಲ್ ರೇಖಾಚಿತ್ರದ ಮೂಲಕ ಸಾಧಕರನ್ನು ಸ್ಮರಿಸುವ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಬಂದಿದೆ. 1998ರಿಂದ ಸುಮಾರು 900ಕ್ಕೂ ಹೆಚ್ಚು ಡೂಡ್ಲ್ ಗಳನ್ನು ರಚಿಸಿ ಪ್ರದರ್ಶಿಸಲಾಗಿದೆ. 2011ರಲ್ಲಿ 150 ಡೂಡ್ಲ್ ಗಳು ಗೂಗಲ್ ಮುಖ್ಯಪುಟದಲ್ಲಿ ರಾರಾಜಿಸಿದೆ.












Click it and Unblock the Notifications