ಕುಡುಕ ಚಾಲಕರಿಗೆ ರೇಣುಕಾಚಾರ್ಯ ಊರುಗೋಲು?

ಹೌದು, ಇಂತಹ ವಿನೂತನ, ವಿಚಿತ್ರ ಐಡಿಯಾ ಒಂದು ರೇಣುಕಾ ಸಾಹೇಬರ ತಲೆಹೊಕ್ಕಿದೆ. ಅವರು ಕುಡುಕ ಚಾಲಕರಿಗೆ ಊರುಗೋಲು ಆಗಲು ಬಯಸಿದ್ದಾರೆ. ವಿಷಯ ಏನಪಾ ಅಂದರೆ ರಾಜಧಾನಿ ಸೇರಿದಂತೆ ಪ್ರಮುಖ ನಗರಗಳಲ್ಲಿ ರಾತ್ರಿ ಪೊಲೀಸರಿಗೆ ಕುಡಿದು ವಾಹನ ಚಲಾಯಿಸುವವರೆಂದರೆ ಬಹು ಪ್ರೀತಿ. ಅಂತಹ ಚಾಲಕರಿಗಾಗಿಯೇ ಹೊಂಚು ಹಾಕುತ್ತಿರುತ್ತಾರೆ. ಅದೂ ಪಬ್ ಮತ್ತು ಬಾರ್ ಗಳ ಆಸುಪಾಸಿನಲ್ಲೇ ಇವರು ಠಿಕಾಣಿ ಹಾಕಿರುತ್ತಾರೆ.
'ಎಣ್ಣೆ' ಏರಿಸಿಕೊಂಡ ಮಂದಿ ತಮ್ಮ ಮನೆಯತ್ತ ಧಾವಿಸಲು ವಾಹನವೇರಿ ಒಂದಷ್ಟು ದೂರ ಹೋಗುವುದಕ್ಕಿಲ್ಲ ಗಪ್ ಅಂತ ಪೊಲೀಸರ ಮೂಗಿಗೆ ಇವರ ವಾಸನೆ ಬಡಿದಿರುತ್ತದೆ. ಐಟ್ಲಗಾ ಅಂತ ಪೊಲೀಸರು ಇವರ ಬಾಯಿಗೆ ಸುಮ್ನೇ ಸುಮ್ನೇ ಅದೆಂಥದೋ ಯಂತ್ರವಿಟ್ಟು ತೆಗಿ 500 ಅಂತಾರೆ.
ಕೊನೆಗೆ ಚೌಕಾಶಿಗಿಳಿದು 300-400 ರೂಪಾಯಿ ಕಿತ್ಕೊಳ್ಳೊದಂತೂ ಗ್ಯಾರಂಟಿ. ಏಕೆಂದರೆ ಕೇಸು ಹಾಕಿದರೆ ಕನಿಷ್ಠ 2,000 ರೂ. ಪೀಕಬೇಕು ಜತೆಗೆ ವಾಹನವೂ ಒಂದಷ್ಟು ಕಾಲ ಕೈತಪ್ಪುತ್ತದೆ.
ಇಂತಿಪ್ಪ ಕುಡುಕ ವಾಹನ ಸವಾರರು ಇತ್ತೀಚೆಗೆ ಈ ಪೊಲೀಸರ ಸಹವಾಸವೂ ಬೇಡ, ಆ ಎಣ್ಣೆ ಅಭಿಷೇಕವೂ ಬೇಡ ಎಂದು ರಾತ್ರಿ ಹೊತ್ತು ವಾಹನವನ್ನು ಹೊರತೆಗೆದಯುವುದಕ್ಕೇ ಹೋಗುತ್ತಿಲ್ಲ. ಇನ್ನು ಬಾರ್ ಅಂಡ್ ಪಬ್ ಗಳಿಂದ ಬಹುದೂರವೇ ಉಳಿಯುತ್ತಿದ್ದಾರೆ.
ಖುದ್ದು ಎಣ್ಣೆ ಮಂತ್ರಿಯೇ ಇಂತಹ ಸವಾರರ ಗೋಳನ್ನು ಹೇಳಿಕೊಂಡಿದ್ದಾರೆ. ಜತೆಗೆ prompt ಆಗಿ ಅವರ ನೆರವಿಗೂ ಬಂದಿದ್ದಾರೆ. ಎಷ್ಟೇ ಆಗಲಿ ಕುಡುಕ ವಾಹನ ಸವಾರರು ಅವರ ಗಿರಾಕಿಗಳೇ ಅಲ್ವೇ?
ಹಾಗಂತ, ಪೊಲೀಸರನ್ನು 'ಹದ್ದುಬಸ್ತಿನಲ್ಲಿಡಲು' ಸನ್ಮಾನ್ಯ ರೇಣುಕಾ ಅವರು ಪೊಲೀಸರ ಅಧಿನಾಯಕ, ಗೃಹ ಸಚಿವ ಆರ್ ಅಶೋಕ ಅವರ ಕಿವಿಗೆ ಹಾಕಿ ತಮ್ಮ 'ಗ್ರಾಹಕರ ಸುಖ-ದುಃಖದ' ಬಗ್ಗೆ ಗಮನಸೆಳೆಯುವುದಾಗಿ ಹೇಳಿದ್ದಾರೆ. ಈ ಪೊಲೀಸರ ಸ್ಪೀಡನ್ನು ಸ್ವಲ್ಪ ತಗ್ಗಿಸಿ. ನನ್ನ ಇಲಾಖೆಯ ಆಮದನಿಗೆ ಇವರು ಕಂಟಕವಾಗಿದ್ದಾರೆ ಎಂದು ಅಲವತ್ತುಕೊಳ್ಳುವುದು ರೇಣುಕಾ ಇರಾದೆಯಾಗಿದೆ.
ಈ ನಿಟ್ಟನಲ್ಲಿ ತಾನು ನೇರವಾಗಿ ಏನೂ ಮಾಡಲಾಗದು. ಇದು ಕಾನೂನು ವಿಷಯ ಎಂದು ಕೈಕೈ ಹಿಸುಕಿಕೊಂಡಿರುವ ರೇಣುಕಾ, ನಮ್ಮ ಮತ್ತು ಪೊಲೀಸ್ ಇಲಾಖೆಯ ಮಧ್ಯೆ ಮಧುರ ಬಾಂಧವ್ಯವಿದೆ. ಖಂಡಿತಾ drunk-drive ಸವಾರರ ನೆರವಿಗೆ ಬರುವುದಾಗಿ ಆಶ್ವಾಸನೆ ನೀಡಿದ್ದಾರೆ. ಕುಡಿದರೂ ದೃಢವಾಗಿ ವಾಹನ ಚಲಾಯಿಸುವ ಸ್ಥಿತಿಯಲ್ಲಿರುವವರಿಗೆ ಒಂದಷ್ಟು ಊರುಗೋಲಾಗೋಣ ತಗೋಳ್ಳೀ ಎಂದಿದ್ದಾರೆ.












Click it and Unblock the Notifications