RBI ತರಲಿದೆ 10 ರೂಪಾಯಿಯ ಹೊಸ ಪ್ಲಾಸ್ಟಿಕ್ ನೋಟ್
ನವದೆಹಲಿ, ಆ 24: ಹತ್ತು ರೂಪಾಯಿ ಮುಖಬೆಲೆಯ ಗರಿಗರಿ ಹೊಸ ಪ್ಲಾಸ್ಟಿಕ್ ನೋಟಗಳನ್ನು ರಿಸರ್ವ್ ಬ್ಯಾಂಕ್ ಸದ್ಯದಲ್ಲೇ ಚಲಾವಣೆಗೆ ತರಲಿದೆ. ಮೊದಲ ಬಾರಿಗೆ ಇಂತಹ ನೋಟುಗಳು ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರಕ್ಕೆ ಕಾಲಿಡಲಿದೆ ಎನ್ನುವುದು ಗಮನಿಸಬೇಕಾದ ಅಂಶ.
RBI ಪ್ರಾಯೋಗಿಕವಾಗಿ ದೇಶದ ಐದು ನಗರಗಳಲ್ಲಿ ಈ ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿದೆ. ಮೈಸೂರು, ಶಿಮ್ಲಾ, ಕೊಚ್ಚಿನ್, ಭುವನೇಶ್ವರ ಮತ್ತು ಜೈಪುರ ನಗರಗಳಲ್ಲಿ ಸದ್ಯದಲ್ಲೇ ಈ ನೋಟು ಚಲಾವಣೆಗೆ ಬರಲಿದೆ.

ಈ ನಗರಗಳಲ್ಲಿ ಪ್ಲಾಸ್ಟಿಕ್ ನೋಟುಗಳಿಗೆ ಸಿಗುವ ಜನಾಭಿಪ್ರಾಯವನ್ನು ಆಲಿಸಿ ನಂತರ ಹಂತಹಂತವಾಗಿ ದೇಶದೆ ಇತರ ಭಾಗಗಳಲ್ಲಿ ಜಾರಿಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.
ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಕಾಲದಲ್ಲಿ ಈ ನೋಟುಗಳ ಕಾರ್ಯನಿರ್ವಹಣೆ ಹೇಗಿರುತ್ತದೆ ಎಂದು ಅರಿಯಲು ಬೇರೆ ಬೇರೆ ಪ್ರಾಕೃತಿಕ ಲಕ್ಷಗಣನ್ನು ಹೊಂದಿರುವ ನಗರಗಳನ್ನು ಚಲಾವಣೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಪ್ರಕಟಿಸಿದೆ.
ಒಂದು ವೇಳೆ ಈ ಪ್ಲಾಸ್ಟಿಕ್ ನೋಟಿನ ಪ್ರಯೋಗ ಯಶಸ್ವಿಯಾದರೆ ಮಳೆಯಲ್ಲಿ ಒದ್ದೆಯಾಗುವ, ಕೊಳೆಯಾಗುವ ಪೇಪರ್ ನೋಟಿನ ಕಿರಿಕಿರಿ ತಪ್ಪಬಹುದಾಗಿದೆ.
ಪ್ಲಾಸ್ಟಿಕ್ ನೋಟಿನಿಂದ ಸರಕಾರಕ್ಕೆ ಮತ್ತು ಸಾರ್ವಜನಿಕರಿಗೆ ಹಲವು ಉಪಯೋಗಗಳಿವೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಮಳೆಯಲ್ಲಿ ನೋಟು ನೆನೆದರೆ ಹರಿದು ಹೋಗುವುದಿಲ್ಲ, ಕೊಳೆಯಾದರೆ ನೀರಿನಲ್ಲಿ ತೊಳೆಯಬಹುದು, ಇದರ ಬಾಳಿಕೆ ಹೆಚ್ಚು, ಖೋಟಾ ನೋಟು ತಯಾರಿಸುವುದು ಕಷ್ಟ ಹಾಗೂ ಇದರಿಂದ ಸರಕಾರಕ್ಕೆ ಹಣ ಉಳಿತಾಯ ಕೂಡಾ ಆಗಲಿದೆ ಎಂದು ಬ್ಯಾಂಕ್ ತಿಳಿಸಿದೆ.












Click it and Unblock the Notifications