ಅಸ್ಸಾಂ ಗಲಭೆ : ಮುಂಬೈನಲ್ಲಿ ಹಿಂಸೆಗೆ ಇಬ್ಬರ ಸಾವು

ಮುಸ್ಲಿಂ ಸಂಘಟನೆಯಾದ ರಾಝಾ ಅಕಾಡೆಮಿ ಪ್ರತಿಭಟನೆಗೆ ಕರೆ ನೀಡಿತ್ತು. ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೆ ನಿಲ್ದಾಣದ ಬಳಿಯಿರುವ ಆಜಾದ್ ಮೈದಾನದಲ್ಲಿ 50 ಸಾವಿರ ಪ್ರತಿಭಟನಾಕಾರರು ಜಮಾಯಿಸಿದ್ದರು. ಆರಂಭದಲ್ಲಿ ಶಾಂತವಾಗಿಯೇ ಇದ್ದ ಪ್ರತಿಭಟನೆ ಮಧ್ಯಾಹ್ನ ಇದ್ದಕ್ಕಿದ್ದಂತೆ ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನಾಕಾರರು ಕಂಡಕಂಡ ವಾಹನಕ್ಕೆ ಬೆಂಕಿ ಹಚ್ಚಲು ಶುರುಮಾಡಿದರು. ಅನಿವಾರ್ಯವಾಗಿ ಪೊಲೀಸರು ಗುಂಡು ಹಾರಿಸಿದಾಗ ಇಬ್ಬರು ಸಾವಿಗೀಡಾಗಿದ್ದಾರೆ.
ಈ ಘಟನೆಯನ್ನು ವರದಿ ಮಾಡಲು ಬಂದಿದ್ದ ಮಾಧ್ಯಮದವರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಲು ಪ್ರಾರಂಭಿಸಿದರು. ಛಾಯಾಚಿತ್ರಕಾರರ ಕ್ಯಾಮೆರಾ ಕಿತ್ತುಕೊಂಡು ಹಾನಿಗೊಳಿಸದರು. ಅಲ್ಲದೆ, ಮಾಧ್ಯಮದವರ 3 ಓಬಿ ವ್ಯಾನುಗಳಿಗೆ ಬೆಂಕಿ ಹಚ್ಚಿದರು. ಈ ದಾಳಿಯಲ್ಲಿ ಮೂವರು ಪತ್ರಕರ್ತರು ಮತ್ತು ಅನೇಕ ಪೊಲೀಸರು ಗಾಯಗೊಂಡಿದ್ದಾರೆ. ಉದ್ರಿಕ್ತರಾಗಿದ್ದ ಜನರನ್ನು ಚೆದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು. ತಹಬದಿಗೆ ಬರದಿದ್ದಾಗ ಗಾಳಿಯಲ್ಲಿ ಗುಂಡು ಕೂಡ ಹಾರಿಸಲಾಯಿತು.
ಆಜಾದ್ ಮೈದಾನದ ಸುತ್ತಲಿರುವ ಅಂಗಡಿಗಳ ಮೇಲೆ ಕೂಡ ಪ್ರತಿಭಟನಾಕಾರರು ಕಲ್ಲು ತೂರಿದ್ದಾರೆ. ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ 10 ಬೆಸ್ಟ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಅನೇಕ ಖಾಸಗಿ ವಾಹನಗಳು ಕೂಡ ಜಖಂ ಆಗಿವೆ. ಪ್ರತಿಭಟನಾಕಾರರನ್ನು ನಿಗ್ರಹಿಸಲು ಬಂದಿದ್ದ ಪೊಲೀಸರ ವಾಹವನ್ನು ಕೂಡ ಸುಟ್ಟು ಹಾಕಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆಜಾದ್ ಮೈದಾನಕ್ಕೆ ಹೋಗುವ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿತ್ತು.
ಮಧ್ಯಾಹ್ನ ಆರಂಭವಾಗಿದ್ದ ಹಿಂಸಾಚಾರ ಸಂಜೆಯ ಹೊತ್ತಿಗೆ ನಿಯಂತ್ರಣಕ್ಕೆ ಬಂದಿದೆ. ಆಸ್ಸಾಂನ ಮುಖ್ಯಮಂತ್ರಿ ತರುಣ್ ಗೊಗೋಯ್ ಅವರು ಪ್ರತಿಭಟನಾಕಾರರು ಶಾಂತರೀತಿಯಿಂದ ಪ್ರತಿಭಟನೆ ನಡೆಸಬೇಕೆಂದು ಮನವಿ ಮಾಡಿದ್ದಾರೆ. ಈ ಕುರಿತು ಮಹಾರಾಷ್ಟ್ರದ ಮುಖ್ಯಮಂತ್ರಿಯ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ಸ್ಥಳಕ್ಕೆ ಮುಂಬೈ ಪೊಲೀಸ್ ಕಮಿಷನರ್ ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿದ್ದು, ಪರಿಸ್ಥಿತಿ ಸಂಜೆಯ ಹೊತ್ತಿಗೆ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದ್ದಾರೆ.


Click it and Unblock the Notifications
