ಮಾರುಕಟ್ಟೆ ಮೌಲ್ಯ: ಟಾಪ್ 10 ನಿಂದ ಹೊರ ಬಿದ್ದ ಭಾರ್ತಿ
ಬೆಂಗಳೂರು, ಆ.8: ದೇಶದ ಅಗ್ರಗಣ್ಯ ಟೆಲಿಕಾಮ್ ಸಂಸ್ಥೆ ಭಾರ್ತಿ ಏರ್ ಟೆಲ್ ಸಂಸ್ಥೆಯ ಮಾರುಕಟ್ಟೆ ಮೌಲ್ಯದಲ್ಲಿ ಕುಸಿತ ಕಂಡಿದೆ.ಮೊದಲ ತ್ರೈಮಾಸಿಕದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದರೂ ಕಂಪನಿ ಷೇರು ಮೌಲ್ಯ ಕುಸಿತ ಕಂಡಿದ್ದರಿಂದ ಟಾಪ್ 1೦ ಕಂಪನಿಯಿಂದ ಹೊರಬಿದ್ದಿದೆ. ಬುಧವಾರ (ಆ.8) ಐಸಿಐಸಿಐ ಬ್ಯಾಂಕ್ 10ನೇ ಸ್ಥಾನಕ್ಕೇರಿದೆ.
ಬಿಎಸ್ ಇಯಲ್ಲಿ ಬುಧವಾರ ಭಾರ್ತಿ ಏರ್ ಟೆಲ್ ಷೇರುಗಳು ಶೇ 4.4ರಷ್ಟು ಕುಸಿತ ಕಂಡಿದೆ.ಸಂಸ್ಥೆಯ ನಿವ್ವಳ ಲಾಭ ಶೇ 37ರಷ್ಟು ಕುಸಿತ ಕಂಡಿದ್ದು 762.2 ಕೋಟಿ ರುಗೆ ಕುಸಿದಿರುವುದು ಜೂ.30, 2012ಕ್ಕೆ ಕೊನೆಗೊಂಡ ತ್ರೈಮಾಸಿಕ ವರದಿಯಿಂದ ತಿಳಿದು ಬರುತ್ತದೆ. ಭಾರ್ತಿ ಸತತ 10ನೇ ಬಾರಿ ತ್ರೈಮಾಸಿಕದಲ್ಲಿ ಕುಸಿತ ಕಂಡಿದೆ.

'ಭಾರ್ತಿ ಸಂಸ್ಥೆಯ ತ್ರೈಮಾಸಿಕದಲ್ಲಿ ಕುಸಿತ ಹಾಗೂ ದೇಶಿ ಮಾರುಕಟ್ಟೆ ಮತ್ತು ಅಫ್ರಿಕಾದ ಘಟಕದಲ್ಲಿ ನಿರೀಕ್ಷಿತ ಲಾಭ ಬರದಿರುವುದು ಸಂಸ್ಥೆಯ m-cap ಕುಸಿತಕ್ಕೆ ಕಾರಣವಾಗಿದೆ' ಎಂದು ಮೋತಿಲಾಲ್ ಓಸ್ವಾಲ್ ಸೆಕ್ಯುರಿಟಿಸ್ ನ ಉಪಾಧ್ಯಕ್ಷ ರಿಕೇಶ್ ಪಾರೀಖ್ ಹೇಳಿದ್ದಾರೆ.
ಏಂಜಲ್ ಬ್ರೋಕಿಂಗ್ ನ ರಿಸರ್ಜ್ ಅನಾಲಿಸ್ಟ್ ಐಟಿ ಹಾಗೂ ಟೆಲಿಕಾಂನ ವಿಶ್ಲೇಷಕಿ ಅಂಕಿತಾ ಸೋಮಾನಿ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಾರ್ತಿ ಸಂಸ್ಥೆಯ Q1 ಕುಸಿತ ಹಾಗೂ ಸತತ ಹತ್ತು ಬಾರಿ ತ್ರೈಮಾಸಿಕ ಆದಾಯದಲ್ಲಿ ಇಳಿಕೆ ಕಂಡಿರುವುದು, ನಿರ್ವಹಣಾ ವೆಚ್ಚದಲ್ಲಿ ಹೆಚ್ಚಳ ಎಲ್ಲವೂ ಸಂಸ್ಥೆಯ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಐಸಿಐಸಿಐ ಬ್ಯಾಂಕಿನ ಷೇರುಗಳು ಬುಧವಾರ ಬೆಳಗ್ಗೆ 971.5 ರು.ನಂತೆ ಶೇ 0.24% ಏರಿಕೆ ಕಂಡಿತ್ತು. ಆದರೆ, ಮಾರುಕಟ್ಟೆ ಮುಚ್ಚುವ ವೇಳೆಗೆ ಶೇ 1.62 ರಷ್ಟು ಕುಸಿತದೊಂದಿಗೆ 958 ರು ಗೆ ಇಳಿದಿದೆ.
ಟಾಪ್ 10 ಸಂಸ್ಥೆ ಹಾಗೂ ಮಾರುಕಟ್ಟೆ ಮೌಲ್ಯ ಪಟ್ಟಿ:
1. ರಿಲಯನ್ಸ್ ಇಂಡಿಸ್ಟ್ರೀಸ್ ಲಿಮಿಟೆಡ್: 2,59,409 ಕೋಟಿ ರು.
2. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ : 2,45,141 ಕೋಟಿ ರು.
3. ಒಎನ್ ಜಿಸಿ : 2,37,885 ಕೋಟಿ ರು.
4. ಕೋಲ್ ಇಂಡಿಯಾ : 2,19,462 ಕೋಟಿ ರು.
5. ಐಟಿಸಿ : 2,04,529 ಕೋಟಿ ರು.
6. ಎಚ್ ಡಿಎಫ್ ಸಿ ಬ್ಯಾಂಕ್ : 1,40,568 ಕೋಟಿ ರು
7. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ : 1,39,332 ಕೋಟಿ ರು.
8. ಎನ್ ಟಿಪಿಸಿ: 1,37,740 ಕೋಟಿ ರು.
9. ಇನ್ಫೋಸಿಸ್ : 1,31,154 ಕೋಟಿ ರು.
10. ಐಸಿಐಸಿಐ : 1,12,006 ಕೋಟಿ ರು.
ಬಿಎಸ್ ಇನಲ್ಲಿ ನೋಂದಾಯಿತ ಸಂಸ್ಥೆಯ ಮಾರುಕಟ್ಟೆ ಮೌಲ್ಯವು ಪ್ರತಿದಿನದ ಮಾರುಕಟ್ಟೆ ಏರಿಳಿತ ಹಾಗೂ ಷೇರು ಮೌಲ್ಯದ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತದೆ. ಇಲ್ಲಿ ನೀಡಿರುವ ಅಂಕಿ ಅಂಶಗಳು ಬುಧವಾರ, 08,2012ಕ್ಕೆ ಅನ್ವಯವಾಗುವಂತೆ ಮಾತ್ರ ಇದೆ ಎಂದು ಓದಿಕೊಳ್ಳ ತಕ್ಕದ್ದು.












Click it and Unblock the Notifications