ಸಂಪುಟದಲ್ಲಿ ಕಳಂಕಿತರು: ಭಾರದ್ವಾಜ್ ಸಿಡಿಮಿಡಿ

Posted By:
Subscribe to Oneindia Kannada
Hansraj Bhardwaj criticizes Shettar govt
ಬೆಂಗಳೂರು, ಜು. 13 : ಮಂತ್ರಿ ಸ್ಥಾನ ಸಿಗದೆ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ಕೆಲ ಶಾಸಕರು ದಂಗೆಯೆದ್ದಿರುವ ಹಿಂದೆಯೆ, ಕೆಲ ಕಳಂಕಿತ ಶಾಸಕರನ್ನು ಸಂಪುಟದಲ್ಲಿ ಸೇರಿಸಿಕೊಂಡಿದ್ದಕ್ಕೆ ಜಗದೀಶ್ ಶೆಟ್ಟರ್ ಸರಕಾರವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾದ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

"ಸಂಪುಟ ಸಚಿವರ ನೂತನ ಪಟ್ಟಿ ತಯಾರಿಸುವ ಮುನ್ನವೇ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಭ್ರಷ್ಟ ಶಾಸಕರನ್ನು ಹೊರಗಿಟ್ಟು ಸರಕಾರವನ್ನು ಶುದ್ಧವಾಗಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದ್ದೆ. ಆದರೆ, ನನ್ನ ಸಲಹೆಯನ್ನು ಬಿಜೆಪಿ ಹೈಕಮಾಂಡ್ ಮತ್ತು ಜಗದೀಶ್ ಶೆಟ್ಟರ್ ಅವರು ಕಡೆಗಣಿಸಿದ್ದಾರೆ" ಎಂದು ಭಾರದ್ವಾಜ್ ಅವರು ಕಿಡಿ ಕಾರಿದ್ದಾರೆ.

"ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿರುವ ಶಾಸಕರನ್ನು ಸಂಪುಟಕ್ಕೆ ಸೇರಿಸಬಾರದು ಎಂದು ರಾಜ್ಯದ ನಾಯಕರಿಗೆ ಹೇಳಿದ್ದೆ. ಆದರೆ, ಸಲಹೆಯನ್ನು ಪರಿಗಣಿಸುವುದಾಗಿ ವಾಗ್ದಾನ ನೀಡಿದ್ದ ರಾಜ್ಯದ ನಾಯಕರು, ಈಗ ಕಳಂಕಿತರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಹೊಣೆಯನ್ನು ಹೈಕಮಾಂಡ್ ಮೇಲೆ ಹಾಕುತ್ತಿದ್ದಾರೆ" ಎಂದು ಅವರು ಶುಕ್ರವಾರ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪನವರ ವಿರುದ್ಧ ಭಿನ್ನಮತೀಯರು ದಂಗೆಯೆದ್ದಿದ್ದಾಗ ಮತ್ತು ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಾಗ ಬಿಜೆಪಿ ಸರಕಾರದ ವಿರುದ್ಧ ಭಾರದ್ವಾಜ್ ಅನೇಕ ಬಾರಿ ಯುದ್ಧ ಸಾರಿದ್ದರು. ಈಗ ಕಳಂಕಿತರನ್ನು ಸಂಪುಟದಲ್ಲಿ ಸೇರಿಸಿಕೊಂಡಿದ್ದಕ್ಕೆ ಮತ್ತೆ ಕೆಂಗಣ್ಣಾಗಿದ್ದಾರೆ. ಭಾರದ್ವಾಜ್ ಅವರ ವಾದವೂ ಸರಿಯಾದದ್ದೆ. ಏಕೆಂದರೆ, ವಿ ಸೋಮಣ್ಣ, ಮುರುಗೇಶ್ ನಿರಾಣಿ, ಸಿಟಿ ರವಿ ಮುಂತಾದವರ ವಿರುದ್ಧ ಕ್ರಿಮಿನಲ್ ಕೇಸುಗಳು ದಾಖಲಾಗಿವೆ.

ಭಾರದ್ವಾಜ್ ಅವರ ವಾದಕ್ಕೆ ಪೂರಕವೆಂಬಂತೆ, ಬಿಜೆಪಿಯಲ್ಲಿನ ಶಾಸಕರೇ ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಸಂಪುಟ ಸಚಿವರ ಕುರಿತು ಅಪಹಾಸ್ಯ ಮಾಡುತ್ತಿದ್ದಾರೆ. ಮೂಡಿಗೆರೆಯ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು, "ಈಗಿನವರು ಯಾರಾದರೂ ಜೈಲಿಗೆ ಹೋದರೆ ಖಂಡಿತ ಮಂತ್ರಿ ಸ್ಥಾನ ಸಿಗುತ್ತದೆ" ಎಂದು ಜಗದೀಶ್ ಶೆಟ್ಟರ್ ಅವರ ಸಂಪುಟವನ್ನು ಲೇವಡಿ ಮಾಡಿದ್ದಾರೆ. ಇಂಥ ಹೇಳಿಕೆಯನ್ನು ಕಾಂಗ್ರೆಸ್ಸಿನಲ್ಲಿ ಯಾರಾದರೂ ಆಡಿದ್ದರೆ ಕಾಂಗ್ರೆಸ್ ಹೈಕಮಾಂಡ್ ಸುಮ್ಮನಿರುತ್ತಿತ್ತಾ? ಆದರೆ, ಬಿಜೆಪಿ ಹೈಕಮಾಂಡ್ ಮಾತ್ರ ತನಗೇನೂ ಕೇಳಿಸಿಯೇ ಇಲ್ಲ ಎಂದು ಸುಮ್ಮನೆ ಕುಳಿತಿದೆ.

ಸದಾನಂದಗೆ ಭಾರದ್ವಾಜ್ ಶಭಾಸ್‌ಗಿರಿ : ಸಮಯ ಸಿಕ್ಕಾಗಲೆಲ್ಲ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ, 'ಕಾಂಗ್ರೆಸ್ ಏಜೆಂಟ್' ಎಂದು ಹೆಸರುಗಳಿಸಿದ್ದ ಹಂಸರಾಜ್ ಭಾರದ್ವಾಜ್ ಅವರು, ಅಪರೂಪಕ್ಕೆಂಬಂತೆ ಸದಾನಂದ ಗೌಡರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ಸದಾನಂದ ಗೌಡ ಅತ್ಯುತ್ತಮವಾಗಿ ಸರಕಾರ ನಡೆಸಿಕೊಂಡು ಹೋಗುತ್ತಿದ್ದರು. ಅವರು ನಿಷ್ಕಳಂಕವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿದ್ದರು. ಬಿಜೆಪಿಗೆ ಮುಖ್ಯಮಂತ್ರಿ ಬದಲಾಗುವುದು ಬೇಕಾಗಿತ್ತು. ಅದಕ್ಕೆ ಸದಾನಂದ ಗೌಡರನ್ನು ಬಲಿಪಶುವನ್ನಾಗಿ ಮಾಡಲಾಯಿತು" ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಸರಕಾರಕ್ಕೆ ಸಲಹೆ ಕೊಡುವುದು, ಮಾರ್ಗದರ್ಶನ ನೀಡುವುದು ಮಾತ್ರ ನನ್ನ ಜವಾಬ್ದಾರಿ. ಅದೇನಿದ್ದರೂ ಅವರ ಸರಕಾರ. ಆದ್ದರಿಂದ ಎಂತೆಂಥವರ ಹೆಸರು ಸೇರಿಸಿ ಕಳುಹಿಸಿದ ಪಟ್ಟಿಗೆ ನಾನು ಸಹಿ ಹಾಕಬೇಕಾಯಿತು ಎಂದು ಅವರು ನುಡಿದಿದ್ದಾರೆ. ಇದೇ ಸಮಯದಲ್ಲಿ, ಯಾವುದೇ ಆರೋಪಗಳಿಗೆ ಗುರಿಯಾಗದಿರುವ ಜಗದೀಶ್ ಶೆಟ್ಟರ್ ಅವರನ್ನು ವೈಯಕ್ತಿಕವಾಗಿ ಭಾರದ್ವಾಜ್ ಪ್ರಶಂಶಿಸಿದ್ದಾರೆ. ಶೆಟ್ಟರ್ ಕೈಕೆಳಗೆ ಸರಕಾರ ಯಾವುದೇ ಭ್ರಷ್ಟಾಚಾರಗಳಿಗೆ ಅವಕಾಶ ನೀಡದೆ ಉಳಿದಿರುವ ಅವಧಿ ಪೂರೈಸುತ್ತದೆ ಎಂಬ ವಿಶ್ವಾಸವಿದೆ ಎಂದು ಭಾರದ್ವಾಜ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka governor Hansraj Bhardwaj has criticized Jagadish Shettar govt for including tainted ministers who have been facing criminal cases. But, Bhardwaj has appreciated Sadananda Gowda for giving corruption free governance.
Please Wait while comments are loading...