ಬೊಕ್ಕಸಕ್ಕೆ 250 ಕೋಟಿ ನಷ್ಟ ಮಾಡಿಲ್ಲ :ಶೆಟ್ಟರ್

Posted By:
Subscribe to Oneindia Kannada
Jagadish rubbishes Denotification Scam
ಬೆಂಗಳೂರು, ಜು.12: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ವಿಧಾನಸೌಧದಲ್ಲಿ ಪ್ರಥಮ ಸುದ್ದಿಗೋಷ್ಠಿಯಲ್ಲೇ ಭೂ ಹಗರಣದ ಬಗ್ಗೆ ಪ್ರಶ್ನೆ ಎದುರಿಸಿದರು. ಭೂ ಹಗರಣ ಆರೋಪವನ್ನು ತಳ್ಳಿ ಹಾಕಿದ ಶೆಟ್ಟರ್ ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿಲ್ಲ. ಇದು ಸುಳ್ಳು ಆರೋಪ ಎಂದರು.

ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರವಿದ್ದ ಕಾಲದಲ್ಲಿ ಅಕ್ರಮವಾಗಿ ಡಿ ನೋಟಿಫೈ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತರೊಬ್ಬರು ಜಗದೀಶ್ ಶೆಟ್ಟರ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶೆಟ್ಟರ್, ಖಾಸಗಿ ದೂರಿನಲ್ಲಿ ಹೇಳಿರುವುದೆಲ್ಲ ಶುದ್ಧ ಸುಳ್ಳು. ನಾನು ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ.

ನನ್ನಿಂದ ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರು ನಷ್ಟವಾಗಿಲ್ಲ. ಡಿನೋಟಿಫಿಕೇಷನ್ ಎಲ್ಲವೂ ಕಾನೂನಿನ ಪ್ರಕಾರವೇ ಆಗಿದೆ. ಹಾಗೂ ಅರ್ಹರಿಗೆ ಪರಿಹಾರ ನೀಡಲಾಗಿದೆ. ಈ ಪ್ರಕರಣದ ಬಗ್ಗೆ ನಾನು ಹೆಚ್ಚಿಗೆ ಹೇಳುವುದಿಲ್ಲ. ಸದ್ಯ ಈ ವಿಷಯ ನ್ಯಾಯಾಲಯದಲ್ಲಿದ್ದು, ನಾನು ಕಾನೂನಿನ ಮೂಲಕವೇ ಉತ್ತರ ನೀಡುತ್ತೇನೆ ಎಂದು ಸಿಎಂ ಶೆಟ್ಟರ್ ಹೇಳಿದ್ದಾರೆ.

ಬೆಂಗಳೂರಿನ ಪತ್ರಿಕೋದ್ಯಮ ವಿದ್ಯಾರ್ಥಿ ಎಸ್ ಎಂ ಚೇತನ್ ಎಂಬುವರು ಜಗದೀಶ್ ಶೆಟ್ಟರ್ ವಿರುದ್ಧ ಅಕ್ರಮ ಡಿ ನೋಟಿಫಿಕೇಷನ್ ಆರೋಪ ಹೊರೆಸಿ ದೂರು ಸಲ್ಲಿಸಿದ್ದರು. ಶೆಟ್ಟರ್ ಅವರ ಭೂ ಹಗರಣದಿಂದ ರಾಜ್ಯದ ಬೊಕ್ಕಸಕ್ಕೆ 250 ಕೋಟಿ ನಷ್ಟವಾಗಿದೆ ಎಂದು ಲೋಕಾಯುಕ್ತಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಖಾಸಗಿ ದೂರನ್ನು ಪರಿಗಣಿಸಿರುವ ಲೋಕಾಯುಕ್ತ ವಿಶೇಷ ನ್ಯಾಯಲಯದ ನ್ಯಾ. ಸುಧೀಂದ್ರ ರಾವ್ ಅವರು ಮುಂದಿನ ವಿಚಾರಣೆಯನ್ನು ಜು.21ಕ್ಕೆ ಮುಂದೂಡಿದ್ದರು,

ಏನಿದು ಪ್ರಕರಣ: ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಕಂದಾಯ ಸಚಿವ ಜಗದೀಶ್ ಶೆಟ್ಟರ್ ಅವರು ಭೂ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಕರ್ನಾಟಕ ಜನ ಜಾಗೃತಿ ವೇದಿಕೆಯ ತಲಕಾಡು ಚಿಕ್ಕರಂಗೇಗೌಡ ಎಂಬುವರು ಆರೋಪಿಸಿದ ಬೆನ್ನಲ್ಲೇ ಲೋಕಾಯುಕ್ತಕ್ಕೆ ಚೇತನ್ ಎಂಬುವವರು ದೂರು ಸಲ್ಲಿಸಿದ್ದರು.

ಚೇತನ್ ಅವರ ದೂರಿನಲ್ಲಿ ಅಂದಿನ ಕಂದಾಯ ಸಚಿವ ಜಗದೀಶ್ ಶೆಟ್ಟರ್, ವಿಶೇಷ ಭೂ ಸ್ವಾಧೀನ ಅಧಿಕಾರಿ ಹಾಗೂ ಕೃಷಿ ಮಾರುಕಟ್ಟೆ ಬೋರ್ಡ್ ನ ನಿರ್ದೇಶಕರನ್ನು ಆರೋಪಿಯನ್ನಾಗಿಸಲಾಗಿದೆ.

ಚೇತನ್ ಅವರ ದೂರಿನ ಪ್ರಕಾರ ಬೆಂಗಳೂರು ಉತ್ತರ ತಾಲೂಕು ದಾಸನಪುರ-ಯಶವಂತಪುರ ಹೋಬಳಿಗೆ ಸೇರಿದ ಒಟ್ಟು 356.36 1/2ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ದಿನಾಂಕ 20.03.2001ರಲ್ಲಿ 4(1) ಹಾಗು 6(1) ಕಲಂನ ಅಡಿಯಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

ಭೂಸ್ವಾಧೀನ ಕಾಯ್ದೆಯ ಅಡಿಯಲ್ಲಿ 356 ಎಕರೆ(188 ಎಕರೆ ಖಾಸಗಿ ಜಮೀನು) ಜಾಗವನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿತ್ತು. ಈ ಜಾಗದಲ್ಲಿ ಎಪಿಎಂಸಿ ಕಾಯಿದೆ ಪ್ರಕಾರ ರೈತರಿಗೆ ಮೆಗಾ ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಹೀಗೆ ವಶಪಡಿಸಿಕೊಂಡಿದ್ದ ಜಮೀನಿನಲ್ಲಿ 168.27 ಎಕರೆ ಸರ್ಕಾರಿ ಭೂಮಿಯಾದರೆ,. ಉಳಿದ 188.9 1/2 ಎಕರೆ ಭೂಮಿ ಖಾಸಗಿಯವರದ್ದಾಗಿತ್ತು.

ಜೆಡಿ(ಎಸ್)-ಬಿಜೆಪಿ ಸರ್ಕಾರದಲ್ಲಿ ಕಂದಾಯ ಮಂತ್ರಿಯಾಗಿದ್ದ ಭಾವಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ ಅವರ ಸೂಚನೆ ಮೇರೆಗೆ ಕಂದಾಯ ಅಧಿಕಾರಿಗಳು ಸ್ವಾಧೀನ ಭೂಮಿಯನ್ನು ಕೈಬಿಡುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದಾದ ನಂತರ 04/03/2006ರಂದು ಸಚಿವ ಸಂಪುಟದ ಗಮನಕ್ಕೆ ತರದೆ 186.9 1/2 ಎಕರೆಯನ್ನು ಡಿನೋಟಿಫಿಕೇಷನ್ ಮಾಡುವ ಮೂಲಕ ಖಾಸಗಿಯವರಿಗೆ ಅನುಕೂಲ ಮಾಡಿಕೊಟ್ಟಿರುವ ಅರೋಪ ಹೊರೆಸಲಾಗಿದೆ. (ಪಿಟಿಐ)

ಅಲ್ಲದೆ ಸ್ವಾಧೀನಪಡಿಸಿಕೊಂಡ ಭೂಮಿಯ ಮೂಲ ಒಡೆಯರಿಗೆ ಪರಿಹಾರಧನ ಇನ್ನೂ ಸಿಕ್ಕಿಲ್ಲ. ಈ ಜಮೀನನ್ನು ಮೂಲ ಮಾಲೀಕರಿಗೆ ಕೊಟ್ಟಿದ್ದರೆ ನಮ್ಮ ಅಭ್ಯಂತರವಿರಲಿಲ್ಲ, ಅದು ಬಿಟ್ಟು ಖಾಸಗಿಯವರಿಗೆ ನೀಡಿರುವುದು ಸರಿಯಿಲ್ಲ. ಇಲ್ಲಿ ಅವ್ಯವಹಾರ ನಡೆದಿದೆ ಎಂದು ತಲಕಾಡು ಚಿಕ್ಕರಂಗೇಗೌಡ ಅವರು ಆರೋಪಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Jagadish Shettar today(Jul.12) rubbished a private complaint filed against him in the Lokayukta court alleging irregularities in land notification by him six years ago. SM Chethan alleged that Shettar illegally de notified 188 acres of land belonging to APMC in Banaglore
Please Wait while comments are loading...