ಅಧಿಕಾರ ತ್ಯಜಿಸುವಾಗ ಭಾವುಕರಾದ ಗೌಡರು
ಬೆಂಗಳೂರು, ಜು 10: " ನನ್ನ ಹನ್ನೊಂದು ತಿಂಗಳ ಅಧಿಕಾರದ ಅವಧಿಯಲ್ಲಿ ನಿಷ್ಪಕ್ಷಪಾತ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇನೆ. ನನ್ನ ಆಳ್ವಿಕೆಯಲ್ಲಿ ನನ್ನಿಂದ ಏನಾದರೂ ತಪ್ಪಾಗಿದ್ದರೆ, ಯಾರಿಗಾದರೂ ನೋವಾಗಿದ್ದರೆ ರಾಜ್ಯದ ಜನತೆಯ ಮತ್ತು ನನ್ನ ಸಹದ್ಯೋಗಿಗಳ ಬಳಿ ಕ್ಷಮೆಯಾಚಿಸುತ್ತೇನೆ".

ಬೆಂಗಳೂರಿನ ಕ್ಯಾಪಿಟಾಲ್ ಹೋಟೆಲ್ ನಲ್ಲಿ ಮಂಗಳವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಭಾವಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬೆಂಬಲ ಸೂಚಿಸಿದ ನಂತರ ಹೀಗೆ ಹೇಳಿದವರು ಇದೀಗ ನಿರ್ಗಮಿಸುತ್ತಿರುವ ಮುಖ್ಯಮಂತ್ರಿ ಸದಾನಂದ ಗೌಡ.
ಜಗದೀಶ್ ಶೆಟ್ಟರ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೌಡ ಕ್ಷಣಕಾಲ ಭಾವೋದ್ವೇಗಕ್ಕೆ ಒಳಗಾದರು. ನಮ್ಮನಮ್ಮಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಇದ್ದದ್ದು ನಿಜ. ನೂತನ ನಾಯಕನಾಗಿ ಆಯ್ಕೆಯಾದ ಶೆಟ್ಟರ್ ಈ ಎಲ್ಲಾ ಗೊಂದಲಗಳಿಗೆ ತಿಲಾಂಜಲಿ ಹಾಡಲಿದ್ದಾರೆ ಎನ್ನುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಪಕ್ಷದ ಎಲ್ಲಾ ಸಚಿವರುಗಳು ರಾಜ್ಯದ ಅಭಿವೃದ್ದಿಗೆ ಶ್ರಮಿಸಬೇಕಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ನಾನು ಶೆಟ್ಟರ್ ಅವಧಿಯಲ್ಲಿ ನನ್ನಿಂದ ಏನಾದರೂ ಸಲಹೆಗಳು ಬೇಕಿದ್ದಲ್ಲಿ ಮುಕ್ತ ಮನಸ್ಸಿನಿಂದ ನೀಡುವೆ ಎಂದು ಸದಾನಂದ ಗೌಡರು ನುಡಿದರು.
ಹನ್ನೊಂದು ತಿಂಗಳ ಅವಧಿಯಲ್ಲಿ ಕಾಲಚಕ್ರ ಯಾವ ರೀತಿ ತಿರುಗುತ್ತೆ ಎನ್ನುವುದಕ್ಕೆ ಕ್ಯಾಪಿಟಾಲ್ ಹೋಟೆಲ್ ನಲ್ಲಿ ನಡೆದ ಇಂದಿನ ಸಭೆ ಸಾಕ್ಷಿಯಾಯಿತು. ಇದೇ ಹನ್ನೊಂದು ತಿಂಗಳ ಹಿಂದೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಬಾರದೆಂದು ಪಟ್ಟು ಹಿಡಿದು ಮತದಾನದ ಮೂಲಕ ಯಡಿಯೂರಪ್ಪ, ಶೆಟ್ಟರ್ ಅವರನ್ನು ಸೋಲಿಸಿ ಸದಾನಂದ ಗೌಡ ಅವರನ್ನು ಆರಿಸಿದ್ದರು.












Click it and Unblock the Notifications