ಬೆಂಗಳೂರು: ಜೂನಿನಲ್ಲಿ ಮಳೆಯೇ ಆಗಿಲ್ಲ; ಪರಿಸ್ಥಿತಿ ಭೀಕರ
ಬೆಂಗಳೂರು, ಜುಲೈ 1: ರಾಜಧಾನಿಯಲ್ಲಿ ಈ ಬಾರಿ ನೀರಿಗಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಆಹಾಕಾರ ಎದ್ದಿದೆ. ಪ್ರತಿಷ್ಠಿತ, ಸುರಕ್ಷಿತ, ಪುರಾತನ ಬಡಾವಣೆಗಳಲ್ಲೂ ಹನಿ ಹನಿ ನೀರಿಗೂ ಬವಣೆ ಪಡುವಂತಾಗಿದೆ. Thanks to ನಿನ್ನೆಯಷ್ಟೇ ಮುಕ್ತಾಯಗೊಂಡ ಜೂನ್ ತಿಂಗಳಿನಲ್ಲಿ ಕಂಡು ಬಂದ ದಾಖಲೆ. ಆ ದಾಖಲೆ ಏನೆಂಬುದು ಕಿವಿಗೆ ಬಿದ್ದರೆ ನಿಮ್ಮ ನಾಲಿಗೆಯ ಮೇಲಿನ ಪಸೆ ಇಂಗಿ ಹೋಗುತ್ತದೆ. ಹಾಗಿದೆ ಪರಿಸ್ಥಿತಿ.

ಏಕೆಂದರೆ ಕಳೆದ 112 ವರ್ಷಗಳಲ್ಲಿ ನಿನ್ನೆಯ ಜೂನ್ ತಿಂಗಳು ನಾಲ್ಕನೆಯ ಬಾರಿಗೆ ಗರಿಷ್ಠ ಪ್ರಮಾಣದಲ್ಲಿ ಒಣಗಿದೆ. ಮುಂಗಾರು ಕಾಲಿರಿಸುವ ಈ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಬಿದ್ದಿರುವ ಮಳೆಯ ಪ್ರಮಾಣ ಕೇವಲ ಕೇವಲ 7.2 ಮಿ.ಮೀ!
ಮಹಾನಗರ ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣದಲ್ಲಿ ಒಣಗಿದ್ದೇ ಇಲ್ಲ ಎನ್ನಬಹುದು. ಆದರೂ ಜ್ಞಾಪಕಶಕ್ತಿಯನ್ನು ಹೆಚ್ಚು ತ್ರಾಸಿಗೆ ಒಡ್ಡಿದಾಗ 1945ರಲ್ಲಿ 4.5 ಮಿ.ಮೀ ಮಾತ್ರವೇ ಮಳೆಯಾಗಿತ್ತು ಎಂಬುದು ಅರಿವಿಗೆ ಬರುತ್ತದೆ. ಇದರಿಂದ ರಾಜಧಾನಿಯ ಬೀದಿಬೀದಿಗಳಲ್ಲಿ ಕುಡಿಯುವ ನೀರಿಗೂ ಆಹಾಕಾರ ಎದ್ದಿದೆ.
ಕಳೆದ ಜೂನ್ ತಿಂಗಳಲ್ಲಿ ಶಾಸ್ತ್ರಕ್ಕಾಗಿ 7.2 ಮಿ.ಮೀ ಮಳೆಯಾಗಿದೆ. ಇದರರ್ಥ ಶೇ. 92ರಷ್ಟು ಮಳೆ ಕೊರತೆಯಾಗಿದೆ. ಅದೇ ಕಳೆದ ವರ್ಷ ಜೂನ್ ತಿಂಗಳಲ್ಲಿ 57.7 ಮಿಮೀ ಮಳೆಯಾಗಿತ್ತು. ಆದರೆ ಅದಕ್ಕಿಂತ ಹಿಂದಿನ ವರ್ಷ ಅಂದರೆ 2010ರ ಜೂನ್ ತಿಂಗಳಲ್ಲಿ ಭರ್ಜರಿಯಾಗಿ 105.2 ಮಿಮೀ ಮಳೆ ಧೋ ಅಂತ ಸುರಿದಿತ್ತು.
ಆದರೂ, ಜುಲೈ ಆರಂಭವಾಗುತ್ತಿದ್ದಂತೆ ಯಾವುದೇ ಘಳಿಗೆಯಲ್ಲಿ ಬೆಂಗಳೂರಿನ ಮೇಲೆ ಮಳೆ ಸಿಂಚನವಾಗಲಿದೆ ಎಂದು ಹವಾಮಾನ ಇಲಾಖೆ ಎಂದಿನಂತೆ ಭರವಸೆ ನೀಡಿದೆ. ಇಂತಹ ಸಂದಿಗ್ಧ ವೇಳೆ ಬಿಬಿಎಂಪಿಯ ಮಳೆ ಕೊಯ್ಲು ಎಷ್ಟು ಫಲಪ್ರದವಾಗಿದೆ ಎಂಬುದರ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಮುಂಗಾರು ಮಳೆಯೇ ಹೀಗಾಗಿರುವಾಗ ನಗರದಲ್ಲಿ ಉಳಿದಿರುವ ನಾಲ್ಕಾರು ಕೆರೆಗಳ ಗತಿಯೇನು ಎಂಬ ಆತಂಕ ಬೆಂಗಳೂರಿಗರನ್ನು ಬೆಚ್ಚಿಬೀಳಿಸುತ್ತಿದೆ. ಪಾತಾಳ ಕಚ್ಚಿರುವ ಅಂತರ್ಜಲ ಪ್ರಮಾಣ ತುಸು ಮೇಲೇರಲು ಸಾಕಷ್ಟು ಕಸರತ್ತು ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅನೇಕ ಬಡಾವಣೆಗಳಲ್ಲಿ ಬೋರ್ ವೆಲ್ ಗಳು ಬತ್ತಿಹೋಗಿವೆ.
ನಗರದಲ್ಲಿ ಸಾಮಾನ್ಯವಾಗಿ ಪ್ರತಿ ತಿಂಗಳು 43.9 ಮಿಮೀ ಮಳೆಯಾಗುತ್ತದೆ. ಆದರೆ ಕಳೆದ ಏಪ್ರಿಲ್ ನಲ್ಲಿಯೂ 13.8 ಮಿಮೀ ಮಾತ್ರವೇ ಮಳೆಯಾಗಿರುವುದು ಪರಿಸ್ಥಿತಿಯನ್ನು ಮತ್ತಷ್ಟು ದುರ್ಭರಗೊಳಿಸಿದೆ. ಇದರ ಮಧ್ಯೆ, ಮೇ ತಿಂಗಳಲ್ಲಿ ಒಂಚೂರು ಮಳೆ ಬಿದ್ದಿತಾದರೂ (143 ಮಿಮೀ) ಅದು ಯಾವ ಮೂಲೆಗೂ ಸಾಕಾಗಲಿಲ್ಲ.
ಜೂನ್ ತಿಂಗಳಲ್ಲಿ ಮಳೆ ಕ್ಷೀಣಿಸಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಅದರಲ್ಲೂ ತಕ್ಷಣಕ್ಕೆ ಮಳೆಯಾಗದಿದ್ದಲ್ಲಿ ಪರಿಸ್ಥಿತಿ ಘನ ಘೋರವಾಗಲಿದೆ. Please! ಬಾರೋ ಬಾರೋ ಮಳೆರಾಯ, ಹುಯ್ಯೋ ಹುಯ್ಯೋ ಮಳೆರಾಯ, ಬೆಂಗಳೂರಿಗರ ಮೇಲೆ ಒಂದಷ್ಟು ಕನಿಕರ ತೋರೋ.












Click it and Unblock the Notifications