ಸ್ಪೇನ್ ಗೂಳಿಗಳ ಮುಂದೆ ಮಂಡಿಯೂರಿದ ಫ್ರೆಂಚರು
ಡೊನೆಶ್ಕ್, ಜೂ.24: ಡಾನ್ ಬಾಸ್ ಅರೀನಾ ಮೈದಾನದಲ್ಲಿ ನಡೆದ ಕ್ವಾಟರ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸ್ಪೇನ್ ದಾಳಿ ತಂತ್ರ ಯಶ ತಂದು ಕೊಟ್ಟಿದೆ. ಆತ್ಮವಿಶ್ವಾಸ ಕಳೆದುಕೊಂಡಿದ್ದ ಫ್ರೆಂಚರನ್ನು ಬಗ್ಗು ಬಡಿದು ಸ್ಪೇನ್ ಗೂಳಿಗಳು ವಿಜೃಂಭಿಸಿದ್ದಾರೆ. ಫ್ರಾನ್ಸ್ ವಿರುದ್ಧ 2-0 ಅಂತರದಿಂದ ಜಯ ದಾಖಲಿಸಿದ ಸ್ಪೇನ್, ಯುರೋ 2012 ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.
ಸ್ಪೇನ್ ತಂಡ ಪಂದ್ಯದ ಪ್ರಥಮಾರ್ಧ ಮತ್ತು ದ್ವಿತೀಯಾರ್ಧದಲ್ಲಿ ತಲಾ ಒಂದೊಂದು ಗೋಲು ಬಾರಿಸಿತು. ಅಂತಿಮ ನಾಲ್ಕರ ಘಟ್ಟದಲ್ಲಿ ಪೋರ್ಚುಗಲ್ ವಿರುದ್ಧ ಆಡಲಿದೆ.

ಫ್ರಾನ್ಸ್ ವಿರುದ್ಧ ಏಳು ಪಂದ್ಯಗಳಲ್ಲಿ ಸ್ಪೇನ್ ನ ಮೊದಲ ಗೆಲುವು ಇದಾಗಿದೆ. ಫ್ರಾನ್ಸ್ ಅಂತಿಮ ನಾಲ್ಕರ ಸುತ್ತಿಗೆ ಪ್ರವೇಶಿಸುವ ಅವಕಾಶ ಕಳೆದುಕೊಂಡು ಸೋತು ಸುಣ್ಣವಾಗಿದೆ.
ಸ್ಪೇನ್ ಕೋಚ್ ವಿಸೆಂಟೆ ಡೆಲ್ ಬೊಸ್ಕೂ ತಂಡದಲ್ಲಿ ಫರ್ನಾಂಡೊ ಟೊರಸ್ ಬದಲಿಗೆ ಸೆಸ್ ಫಾಬ್ರೆಗಸ್ ಅವರನ್ನು ಆಡಿಸಿದ್ದು, ಸ್ಪೇನ್ ಗೆ ಹೆಚ್ಚಿನ ಲಾಭವನ್ನು ಉಂಟು ಮಾಡಿತು. ಫಬ್ರೆಗಸ್ ಹಲವಾರು ಬಾರಿ ಫ್ರಾನ್ಸ್ ನ ರಕ್ಷಣಾ ವಲಯದ ಮೇಲೆ ದಾಳಿ ಮಾಡಿದರು. ಫ್ರಾನ್ಸ್ ರಕ್ಷಣಾ ವಲಯದಲ್ಲಿ ಹೆಚ್ಚಿನ ತಪ್ಪುಗಳನ್ನು ಮಾಡಿದ್ದರಿಂದ ಸ್ಪೇನ್ ಗೆ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಫಾಬ್ರೆಗಸ್ ನ್ನು ಎದುರಾಳಿ ಪಾಳಯದ ಆಟಗಾರ ಕೆಳಕ್ಕುರುಳಿಸಿದರೂ ಪೆನಾಲ್ಟಿ ಮಾತ್ರ ಸಿಗಲಿಲ್ಲ. 19ನೇ ನಿಮಿಷದಲ್ಲಿ ಸ್ಪೇನ್ ಗೋಲು ಬಾರಿಸಿ ಮುನ್ನಡೆಯನ್ನು ಪಡೆದುಕೊಂಡಿತು. ಪಂದ್ಯದ 90+1 ನೇ ನಿಮಿಷದಲ್ಲಿ ಅಲಾನ್ಸೋ ಪೆನಾಲ್ಟಿ ಕಿಕ್ ವ್ಯರ್ಥ ಮಾಡದೆ ಸುಲಭವಾಗಿ ಗೆಲು ದಾಖಲಿಸಿದರು.
ಈ ಮುನ್ನಡೆ ಬಳಿಕ ಸ್ಪೇನ್ ತನ್ನ ದಾಳಿಯನ್ನು ತೀವ್ರಗೊಳಿಸಿತು. ಸ್ಪೇನ್ ಆಟಗಾರರ ದಾಳಿಗೆ ಫ್ರಾನ್ಸ್ ನ ರಕ್ಷಣಾ ವಲಯ ಕಂಗೆಟ್ಟು ಹೋಯಿತು. ಇಷ್ಟೇ ಅಲ್ಲದೆ ಫ್ರಾನ್ಸ್ ನ ಫಾರ್ವರ್ಡ್ ಆಟಗಾರರು ದೊಡ್ಡ ಮಟ್ಟದ ಪರಿಣಾಮ ಬೀರಲು ವಿಫಲರಾದರು. ಪಂದ್ಯದ ಅಂತಿಮ ಹತ್ತು ನಿಮಿಷದಲ್ಲಿ ಸ್ಪೇನ್ ಗೆ ಸ್ವಲ್ಪ ಆತಂಕದ ಪರಿಸ್ಥಿತಿ ಎದುರಾಯಿತು. ಆದರೆ ಗಾಯಾಳು ಸಮಯದಲ್ಲಿ ಅಲ್ಪೊನ್ಸೊ ಬಾರಿಸಿದ ಗೋಲು ಸ್ಪೇನ್ ಗೆಲುವನ್ನು ಖಚಿತಪಡಿಸಿತು.
ಫ್ರಾನ್ಸ್ ಪರ ಬೆನ್ಜೆಮಾ ಮತ್ತೊಮ್ಮೆ ವಿಫಲರಾದರು. ಮೊದಲಾರ್ಧದಲ್ಲಿ ಒಂದೆರಡು ಬಾರಿ ದಾಳಿ ಮಾಡಿದ್ದು ಬಿಟ್ಟರೆ ಅನೇಕ ಮಿಸ್ ಪಾಸ್ ಗಳನ್ನು ನೀಡಿ ಫ್ರಾನ್ಸ್ ಆಸೆ ಮಣ್ಣುಗೂಡಿಸಿದರು. ರಿಬೇರಿ ಉತ್ತಮ ಆಟವಾಡಿದರೆ, ಬದಲಿ ಆಟಗಾರನಾಗಿ ಬಂದ ನಾಸ್ರಿ ಹೆಚ್ಚಿನ ಅವಕಾಶ ಪಡೆಯಲಿಲ್ಲ.ಬ್ಲಾಂಕ್ ಅವರ 4-5-1 ರಣತಂತ್ರ ಫ್ರಾನ್ಸ್ ಗೆ ಮುಳುವಾಯಿತು.












Click it and Unblock the Notifications