ಧರ್ಮ-ಕೃಷ್ಣ-ಸ್ವಾಮಿ ಅಕ್ರಮ ಮತ್ತೆ ಸದಾ ಸರ್ಕಾರ ವರದಿ

ಮೂವರು ಮಾಜಿ ಸಿಎಂಗಳ ಅಧಿಕಾರ ಅವಧಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಪ್ರಕರಣಗಳ ಸವಿವರಗಳು, ಲೋಕಾಯುಕ್ತ ವರದಿಯಲ್ಲಿನ ದಾಖಲೆಗಳು ಉಲ್ಲೇಖಗಳು ಈ ಪತ್ರದಲ್ಲಿ ಸೇರಿಸಲಾಗಿದೆ.
ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಟಿಜೆ ಅಬ್ರಹಾಂ ಎಂಬುವವರು ಖಾಸಗಿ ದೂರು ಸಲ್ಲಿಸಿದ್ದರು. ಅವರು ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ತನಿಖೆಗೆ ನ್ಯಾ. ಸುಧೀಂದ್ರರಾವ್ ಅವರು ಆದೇಶಿಸಿದ್ದರು.
ಸಿಬಿಐ ತನಿಖೆ ಇಲ್ಲ?: ಮೂವರು ಮಾಜಿ ಸಿಎಂಗಳ ಮೇಲೆ ಸಿಬಿಐ ತನಿಖೆ ನಡೆಸುವ ಬಗ್ಗೆ ಅಭಿಪ್ರಾಯ ತಿಳಿಸುವಂತೆ ರಾಜ್ಯ ಸರ್ಕಾರವನ್ನು ಸಿಇಸಿ ಕೋರಿತ್ತು. ಆದರೆ, ಈ ಬಗ್ಗೆ ಕೇಂದ್ರ ಉನ್ನತಾಧಿಕಾರಿಗಳ ಸಮಿತಿಯೇ ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದು ಹೇಳಿ ಸದಾನಂದ ಗೌಡರ ಸರ್ಕಾರ ನುಣುಚಿಕೊಂಡಿದೆ.
ವರದಿ ಸಲ್ಲಿಕೆ ವಿಳಂಬ ನೀತಿ ಹಾಗೂ ಸಿಬಿಐಗೆ ತನಿಖೆ ವಹಿಸಲು ಶಿಫಾರಸು ಮಾಡದ ಸದಾನಂದ ಗೌಡರ ಸರ್ಕಾರದ ಮೇಲೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹಜವಾಗಿ ಸಿಟ್ಟಾಗಿದ್ದಾರೆ.
ಮೂವರು ಸಿಎಂಗಳು ಇದೇ ಪ್ರಕರಣದ ಬಗ್ಗೆ ಹೈಕೋರ್ಟ್ ನಲ್ಲಿ ಹಿನ್ನೆಡೆ ಉಂಟಾದಾಗ, ಸುಪ್ರೀಂಕೋರ್ಟ್ ಮೊರೆ ಹೊಕ್ಕು ತನಿಖೆಗೆ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಸದಾನಂದ ಗೌಡರ ಸರ್ಕಾರ ಜೆಡಿಎಸ್ ಹಾಗೂ ಕಾಂಗ್ರೆಸ್ ಕೆಲ ನಾಯಕರ ಪರ ಕೆಲಸ ಮಾಡುತ್ತಿದೆ ಎಂದು ರಾಜಕೀಯ ವಲಯದಲ್ಲಿ ಹಬ್ಬಿರುವ ಸುದ್ದಿಗೆ ಪುಷ್ಟಿ ನೀಡುವಂತೆ ಸದಾನಂದ ಗೌಡರು ನಡೆದುಕೊಂಡಿದ್ದಾರೆ.
ಸದಾನಂದ ಗೌಡರ ಸಚಿವ ಸಂಪುಟದ ಅನೇಕ ಹಿರಿಯ ಸದಸ್ಯರೂ ಕೂಡಾ ಎಸ್ ಎಂ ಕೃಷ್ಣ, ಧರಂಸಿಂಗ್ ಹಾಗೂ ಎಚ್ ಡಿ ಕುಮಾರಸ್ವಾಮಿ ಅವರ ಮೇಲಿನ ಆರೋಪಗಳ ಸತ್ಯಾಸತ್ಯತೆ ತಿಳಿಯಬೇಕಾದರೆ ಸಿಬಿಐ ತನಿಖೆಯೇ ಸೂಕ್ತ ಎಂದು ಅಗ್ರಹಿಸಿದ್ದರು.
ಅಬ್ರಹಾಂಗೂ ಹಿನ್ನೆಡೆ: ಮೂವರು ಮಾಜಿ ಸಿಎಂಗಳ ಅಕ್ರಮಗಳನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರಿಗೂ ಹಿನ್ನೆಡ ಉಂಟಾಗಿದೆ.
ಮಾಜಿ ಮುಖ್ಯಮಂತ್ರಿಗಳ ಕಾಲದಲ್ಲಿ ನಡೆದ ಅಕ್ರಮಗಳ ಪ್ರಕರಣವನ್ನು ಸಬಿಐ ತನಿಖೆಗೆ ವಹಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೊಕ್ಕಿದ್ದರು. ನಂತರ ಕಾನೂನು ಕ್ರಮ ಜರುಗಿಸಲು ಅನುಮತಿ ಕೋರಿ ಲೋಕಸಭಾ ಕಾರ್ಯದರ್ಶಿಗೆ ದೂರು ನೀಡಿದ್ದರು. ಆದರೆ, ದೂರು ವಾಪಸ್ ಬಂದಿದ್ದು, ವಿಧಾನಸಭೆ ಸ್ಪೀಕರ್ ಅವರೇ ತೀರ್ಮಾನ ಕೈಗೊಳ್ಳಲಿ ಎಂದು ಸೂಚಿಸಲಾಗಿದೆ.
ಈಗ ರಾಜ್ಯ ಸರ್ಕಾರ ಸಲ್ಲಿಸಿರುವ 11 ಪುಟಗಳ ಹೊಸ ಚಾರ್ಚ್ ಶೀಟ್ ಬಳಸಿ ಸಿಇಸಿ ತೆಗೆದುಕೊಳ್ಳುವ ಕ್ರಮ ಕುತೂಹಲಕಾರಿಯಾಗಿದೆ.
ಲೋಕಾಯುಕ್ತ ವರದಿ ಉಲ್ಲೇಖ, ಮೈಸೂರು ಮಿನರಲ್ಸ್ ಗಣಿಗಾರಿಕೆ ವಹಿವಾಟು,ಹೈಕೋರ್ಟು ತೀರ್ಪು, ರಾಜ್ಯದ ಬೊಕ್ಕಸಕ್ಕೆ ಉಂಟಾದ ನಷ್ಟ ಮುಂತಾದ ವಿವರಗಳು ಈ ವರದಿಯಲ್ಲಿದೆ. ಈ ದಾಖಲೆಗಳ ಆಧಾರದ ಮೇಲೆ ಮೂವರು ಮಾಜಿ ಸಿಎಂಗಳ ಮೇಲೆ ಸಿಬಿಐ ತನಿಖೆಗೆ ಸರ್ಕಾರ ಶಿಫಾರಸು ಮಾಡದಿದ್ದರೂ ಸಿಇಸಿ ತಂಡ ಸುಪ್ರೀಂಕೋರ್ಟ್ ಗೆ ನೀಡುವ ವರದಿಯಲ್ಲಿ ಸಿಬಿಐ ತನಿಖೆಗೆ ಆಗ್ರಹಿಸುವ ವಿಶ್ವಾಸವನ್ನು ಟಿಜೆ ಅಬ್ರಹಾಂ ವ್ಯಕ್ತಪಡಿಸಿದ್ದಾರೆ.












Click it and Unblock the Notifications