ಮಗನ ರಕ್ಷಣೆಗಾಗಿ ಅತ್ಯಾಚಾರಕ್ಕೀಡಾದ ಮಹಿಳೆ

'ಆರಂಭದಲ್ಲಿ ನನ್ನ ಮೇಲೆ ರೇಪ್ ಮಾಡಿದ ಆ ದುರುಳರು ಅದನ್ನು MMS ಮಾಡಿಟ್ಟುಕೊಂಡರು. ಮುಂದೆ ಅದನ್ನೇ ಅಸ್ತ್ರವಾಗಿ ಬಳಸಿಕೊಂಡರು. ನನ್ನ ಗಂಡ ಮನೆಯಿಂದ ಹೊರಬೀಳುತ್ತಿದ್ದಂತೆ ಮನೆಗೆ ಬರುತ್ತಿದ್ದ ಆ ಪಾಪಿಗಳು ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದರು' ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆ ಗೃಹಿಣಿ ತಿಳಿಸಿದ್ದಾರೆ.
ಪ್ರಕರಣ ಮೊನ್ನೆ ಭಾನುವಾರ ಬೆಳಕಿಗೆ ಬಂದಿದೆ. ಎಂದಿನಂತೆ ಬಾಧಿತ ಮಹಿಳೆಯ ಪತಿ ಥಾಣೆಯಲ್ಲಿರುವ ಅಂಗಡಿಗೆ ಕೆಲಸಕ್ಕೆಂದು ತೆರಳಿದ್ದಾರೆ. ಆದರೆ ಆತ ದಿಢೀರನೆ ಮನೆಗೆ ವಾಪಸಾಗಿದ್ದಾರೆ. ಆಗ ತನ್ನ ಪತ್ನಿಯು ಯುವಕನೊಬ್ಬನ ಜತೆ ಮಲಗಿರುವುದನ್ನು ಕಂಡು ದಂಗುಬಡಿದಿದ್ದಾರೆ.
ತನ್ನ ಪತ್ನಿ ತನಗೆ ಮೋಸ ಮಾಡುತ್ತಿದ್ದಾಳೆಂದು ಪತಿರಾಯ ಭಾವಿಸಿದ್ದಾನೆ. ಕೋಪೋದ್ರಿಕ್ತಗೊಂಡ ಪತಿ, ಆ ಯುವಕನನ್ನು ಮನಬಂದಂತೆ ಥಳಿಸಿದ್ದಾನೆ. ಬಳಿಕ, ಪತ್ನಿಯ ಮೇಲೂ ಸಿಟ್ಟಿಗೆದ್ದಿದ್ದಾನೆ. ಇದು ಅಕ್ಕಪಕ್ಕದ ಮನೆಯವರ ಕುತೂಹಲ ಕೆರಳಿಸಿದೆ. ಇದರಿಂದ ತನ್ನದೇ ಮರ್ಯಾದೆ ಹೋಗುತ್ತಿದೆ ಎಂದು ಮಾನಕ್ಕೆ ಅಂಜಿದ ಪತಿ, ಯುವಕನನ್ನು ಬಿಟ್ಟುಬಿಟ್ಟಿದ್ದಾನೆ. ಆದರೆ ಪೊಲೀಸರಿಗೂ ದೂರು ನೀಡಲು ಹಿಂಜರಿದಿದ್ದಾನೆ.
ಆದರೆ ಸೋಮವಾರ ಅದೇ ರಿಪೀಟ್ ಶೋ ಆಗಿದೆ. ತನ್ನ ಪತ್ನಿ ಮತ್ತೊಬ್ಬ ಯುವಕನ ಜತೆ ಮಲಗಿರುವುದು ಗಂಡನ ಕಣ್ಣಿಗೆ ಬಿದ್ದಿದೆ. ಆಗ ಎಚ್ಚೆತ್ತ ಪತಿ ಮಹಾಶಯನಿಗೆ ಆತನ ಪತ್ನಿ ತನ್ನಿಂದ ಏನನ್ನೋ ಮುಚ್ಚಿಡುತ್ತಿದ್ದಾಳೆ ಎಂಬುದು ಅರಿವಿಗೆ ಬಂದಿದೆ.
ಆಗ ಬಾಧಿತ ಮಹಿಳೆ ಆರು ತಿಂಗಳಿಂದ ತನ್ನ ಮೇಲೆ ದುಷ್ಕರ್ಮಿಗಳು ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದಾರೆ ಎಂದು ಗಂಡನಿಗೆ ತಿಳಿಸಿದ್ದಾಳೆ. ಮೊದಲು ಚಾಕು ತೋರಿಸಿ, ಅತ್ಯಾಚಾರ ನಡೆಸಿದ್ದು. ನಂತರ ಅದನ್ನು MMS ಮಾಡಿ ಬೆದರಿಸಿ, ಮತ್ತೆ ಅತ್ಯಾಚಾರ ನಡೆಸಿದ್ದು. ಬಳಿಕ, ಮಗುವನ್ನು ಕೊಲ್ಲುವುದಾಗಿ ಬೆದರಿಸಿ, ಅತ್ಯಾಚಾರ ಮಾಡಿದ್ದು ಎಲ್ಲವನ್ನೂ ಆ ಮಹಿಳೆ ಚಾಚೂ ತಪ್ಪದೆ ಗಂಡನಿಗೆ ಹೇಳಿದ್ದಾಳೆ.
ಇದನ್ನು ಕೇಳಿದ ಗಂಡ, ತನ್ನ ಹೆಂಡತಿಯ ಜತೆಗೂಡಿ ಸೀದಾ ಪೊಲೀಸ್ ಠಾಣೆಗೆ ತೆರಳಿ, ದೂರು ನೀಡಿದ್ದಾರೆ. ತಕ್ಷಣ ಕ್ರಮ ಕೈಗೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇನ್ನೂ ನಾಲ್ವರು ನಾಪತ್ತೆಯಾಗಿದ್ದು, ಶೀಘ್ರವೇ ಅವರನ್ನು ಬಂಧಿಸುವುದಾಗಿ ಸಾಂತಾ ಕ್ರೂಸ್ ಪೊಲೀಸರು ಹೇಳಿದ್ದಾರೆ.












Click it and Unblock the Notifications