ಸೈನಾ ನೆಹ್ವಾಲ್ ಮುಡಿಗೆ ಥಾಯ್ಲೆಂಡ್ ಕಿರೀಟ

ಥಾಯ್ಲೆಂಡ್ ನ ಆಟಗಾರ್ತಿ ರಚನಾಕ್ ಇಂಥನಾನ್ ರನ್ನು ಭಾನುವಾರ (ಜೂ.10) ಎದುರಿಸಿದ ಸೈನಾ 19-21,21-15,21-10ರಲ್ಲಿ ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.
ಮೊದಲ ಸೆಟ್ ಕಳೆದುಕೊಂಡ ಸೈನಾ, ಎರಡನೇ ಸೆಟ್ ನಲ್ಲಿ ಭರ್ಜರಿ ಆಟ ಪ್ರದರ್ಶಿಸಿದರು. ಇಂಥನಾನ್ ಗೆ ಸ್ಥಳೀಯರ ಭಾರಿ ಬೆಂಬಲವಿತ್ತು. ಆದರೆ, ಸೈನಾ ತನ್ನ ತಾಳ್ಮೆ ಕಳೆದುಕೊಳ್ಳದೆ ನೆಟ್ ಬಳಿ ಅದ್ಭುತ ಡ್ರಾಪ್ ಶಾಟ್ ಗಳನ್ನು ಹೊಡೆದು ಮೂರನೆ ಸೆಟ್ ನತ್ತ ಕಣ್ಣಿಟ್ಟರು.
ಪಂದ್ಯದ ಮೇಲೆ ಹಿಡಿತ ಹೊಂದಿದ ಸೈನಾ ಮೂರನೇ ಸೆಟ್ ಅನ್ನು ಸುಲಭವಾಗಿ ಗೆಲ್ಲುವ ಮೂಲಕ ಪ್ರಶಸ್ತಿ ಗಳಿಸಿದರು.
ಸೆಮಿಫೈನಲ್ಸ್ ನಲ್ಲಿ ಟೂರ್ನಿಯ ಫೇವರೀಟ್ ಎನಿಸಿದ್ದ ಪೋರ್ನ್ ಟಿಪ್ ಬುರಾನಾಪ್ರಸರ್ಟ್ ಸುಕ್ ಅವರನ್ನು 24-22, 21-11 ರ ನೇರ ಸೆಟ್ ಗಳಲ್ಲಿ ಮಣಿಸಿದ್ದ ಸೈನಾ ಫೈನಲ್ ನಲ್ಲಿ ಮತ್ತೊಬ್ಬ ಥಾಯ್ಲೆಂಡ್ ಆಟಗಾರ್ತಿಯನ್ನು ಮಣಿಸಿ ಪ್ರಶಸ್ತಿ ಗೆದ್ದಿದ್ದಾರೆ.
ಸ್ವಿಟ್ಜರ್ಲೆಂಡ್ ನ ಬಾಸೆಲ್ ನಲ್ಲಿ ಮಾರ್ಚ್ ನಲ್ಲಿ ನಡೆದ ಸ್ವಿಸ್ ಓಪನ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ನಲ್ಲಿ ಇದೇ ಆಟಗಾರ್ತಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದ ಸೈನಾ ಈಗ ಮತ್ತೊಂದು ಗ್ರಾಂಡ್ ಪ್ರಿಕ್ಸ್ ಗೆದ್ದ ಸಾಧನೆ ಮೆರೆದಿದ್ದಾರೆ.
ಸೂಪರ್ ಸೈನಾ: ಥಾಯ್ಲೆಂಡ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಡಬಲ್ಲ ನಿರೀಕ್ಷೆ ಹುಟ್ಟಿಸಿರುವ ಕ್ರೀಡಾಪಟುಗಳ ಪೈಕಿ ಸೈನಾ ಮೊದಲಿಗರಾಗಿದ್ದಾರೆ. ಸೈನಾ ನೆಹ್ವಾಲ್ ಗೆದ್ದಿರುವ ಪ್ರಮುಖ ಪ್ರಶಸ್ತಿಗಳ ಪಟ್ಟಿ ಇಂತಿದೆ:
* 2012ರಲ್ಲಿ ಥಾಯ್ಲೆಂಡ್ ಓಪನ್
* 2012ರಲ್ಲಿ ಸ್ವಿಸ್ ಓಪನ್
* 2011ರಲ್ಲಿ ಸ್ವಿಸ್ ಓಪನ್
* 2010ರಲ್ಲಿ ಇಂಡಿಯನ್ ಓಪನ್
* 2010ರಲ್ಲಿ ಹಾಂಗ್ ಕಾಂಗ್ ಸೂಪರ್ ಸೀರಿಸ್, ಚೈನೀಸ್ ತೈಪೆ ಓಪನ್
* 2010ರಲ್ಲಿ ಇಂಡೋನೇಷಿಯಾ ಸೂಪರ್ ಸೀರಿಸ್, ಸಿಂಗಪುರ್ ಸೂಪರ್ ಸೀರಿಸ್
* 2009ರಲ್ಲಿ ಇಂಡೋನೇಷಿಯಾ ಸೂಪರ್ ಸೀರಿಸ್.
ಪದ್ಮಶ್ರೀ ಪ್ರಶಸ್ತಿ ಗಳಿಸಿರುವ 22ರ ಹರೆಯ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಒಲಿಂಪಿಕ್ಸ್ ಪ್ರಶಸ್ತಿ ಕನಸು ಇನ್ನೂ ನನಸಾಗಿಲ್ಲ. 2008ರ ಒಲಿಂಪಿಕ್ಸ್ ನ ಕ್ವಾಟರ್ ಫೈನಲ್ಸ್ ನಲ್ಲಿ ಮರಿಯಾ ಕ್ರಿಸ್ಟಿನ್ ವಿರುದ್ಧ 28-26, 14-21, 15-21 ರಲ್ಲಿ ಸೋಲು ಅನುಭವಿಸಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದರು.












Click it and Unblock the Notifications