ರೇವ್ ಪಾರ್ಟಿ: ಪರ್ನೆಲ್, ರಾಹುಲ್ ಶರ್ಮಾ ಸೆರೆ

ನಿನ್ನೆ ಭಾನುವಾರ ರಜಾ ಮೋಜಿನಲ್ಲಿ ತೇಲಿದ್ದ ಐಪಿಎಲ್ ಆಟಗಾರರಾದ ವೇಯ್ನ್ ಪರ್ನೆಲ್, ರಾಹುಲ್ ಶರ್ಮಾ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರಿಬ್ಬರೂ ಪುಣೆ ವಾರಿಯರ್ಸ್ ತಂಡದ ಆಟಗಾರರು.
ಮಹಾನಗರಿಯ ಪ್ರತಿಷ್ಠಿತ ಜುಹೂ ಪ್ರದೇಶದಲ್ಲಿರುವ ಓಕ್ ವುಡ್ ಪ್ರಿಮಿಯರ್ ಹೋಟೆಲ್ ನಲ್ಲಿ ಆಯೋಜಿಸಿದ್ದ ರೇವ್ ಪಾರ್ಟಿ ಮೇಲೆ ಮುಂಬೈ ಪೊಲೀಸರು ನಡೆಸಿದ ದಾಳಿಯಲ್ಲಿ ಈ ಆಟಗಾರರ ಜತೆಗೆ 100ಕ್ಕೂ ಅಧಿಕ ಪಾರ್ಟಿ 'ಅನಿಮಲ್' ಗಳನ್ನು ನಿನ್ನೆ ರಾತ್ರಿ ಸೆರೆ ಹಿಡಿಯಲಾಗಿದೆ.
ಈ ಮಧ್ಯೆ, ಬಂಧಿತರ ಹೆಸರುಗಳು ಪೊಲೀಸರು ಬಹಿರಂಗಪಡಿಸಿಲ್ಲ. ಪಂಚನಾಮೆ ಜಾರಿಯಲ್ಲಿದ್ದು, ವೈದ್ಯಕೀಯ ಪರೀಕ್ಷೆಗಳ ನಂತರ ಹೆಚ್ಚಿನ ವಿವರ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿ ಆರ್ ಪಾಟೀಲ್ ಹೇಳಿದ್ದಾರೆ. ಆದರೆ ಮಾಧ್ಯಮ ವರದಿಗಳ ಪ್ರಕಾರ ಬಂಧಿತ ಕ್ರಿಕೆಟ್ ಆಟಗಾರರ ಹೆಸರು ವೇಯ್ನ್ ಪರ್ನೆಲ್ ಮತ್ತು ರಾಹುಲ್ ಶರ್ಮಾ ಎಂದು ತಿಳಿದುಬಂದಿದೆ.
ಗಮನಾರ್ಹವೆಂದರೆ ಸಭ್ಯ ಆಟಗಾರ ಎಂದು ಕರೆಯಲಾಗುವ ರಾಹುಲ್ ಶರ್ಮಾ ಈ ಜಾಲದಲ್ಲಿ ಹೇಗೆ ಸಿಲುಕಿಕೊಂಡರು ಎಂಬುದು?
ಓಕ್ ವುಡ್ ಪ್ರಿಮಿಯರ್ ಹೋಟೆಲ್ ನಲ್ಲಿದ್ದುದು ನಿಜ. ಆದರೆ ಬೇರೆಯದೇ ಪಾರ್ಟಿಗಾಗಿ ಅಲ್ಲಿಗೆ ತೆರಳಿದ್ದೆ ಎಂದು ಅವರು ಹೇಳಿಕೆ ನೀಡಿದ್ದಾರೆ. 'ಜುಹೂನಲ್ಲಿರುವ ಓಕ್ ವುಡ್ ಪ್ರಿಮಿಯರ್ ಹೋಟೆಲಿನಲ್ಲಿ ಆಯೋಜಿಸಲಾಗಿದ್ದ ಬರ್ತ್ ಡೇ ಪಾರ್ಟಿಗೆ ಹೋಗಿದ್ದೆ. ನಾನು ಅಲ್ಲಿಗೆ ಹೋಗುವ ವೇಳೆಗೆ ಯಾರೂ ಅಲ್ಲಿರಲಿಲ್ಲ' ಎಂದು ರಾಹುಲ್ ಹೇಳಿದ್ದಾರೆ.
ಓಕ್ ವುಡ್ ಹೋಟೆಲ್ ರೇವ್ ಪಾರ್ಟಿಯಲ್ಲಿ ಸೆರೆ ಸಿಕ್ಕವರಲ್ಲಿ 38 ಯುವತಿಯರು, 58 ಯುವಕರು, 19 ವಿದೇಶಿಯರು ಇದ್ದಾರೆ. ಬಂಧಿತರಲ್ಲಿ ಸಮಾಜದ ಗಣ್ಯವ್ಯಕ್ತಿಗಳು, ಉದ್ಯಮ, ಚಿತ್ರರಂಗ, ಕ್ರೀಡೆ, ರಾಜಕೀಯ ವಲಯದ ಮುಖಂಡರ ಕುಟುಂಬಕ್ಕೆ ಸೇರಿದವರಾಗಿದ್ದಾರೆ.












Click it and Unblock the Notifications