ಗೋವಾಗೂ ಕಾಟ ಕೊಡುತ್ತಿರುವ ಇರಾನಿ ಗ್ಯಾಂಗ್

'ಇರಾನಿಯನ್ ಗ್ಯಾಂಗ್' ಎಂಬ ಹೆಸರಿನಲ್ಲಿ ಪಾತಕಿಗಳು ಸ್ಥಳೀಯ ಪೊಲೀಸ್ ವೇಷ ಧರಿಸಿ ವೃದ್ಧ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಆಭರಣ ದೋಚುವ ಪ್ರಕರಣಗಳು ಹೆಚ್ಚಾಗಿದೆ.
ಮೋಟರ್ ಬೈಕ್ ಮೂಲಕ ಬರುವ ಕಳ್ಳರು, ಸಾರ್ವಜನಿಕರಲ್ಲಿ ಕಳ್ಳರ ಬಗ್ಗೆ ಎಚ್ಚರಿಕೆ ಮೂಡಿಸುವ ನಾಟಕವಾಡುತ್ತಾರೆ. ನಿಮ್ಮ ಆಭರಣ, ನಗ ನಾಣ್ಯಗಳನ್ನು ಕರ್ಚೀಫಿನಲ್ಲಿ ಕಟ್ಟಿಡಿ. ನಾವು ನಿಮಗೆ ರಕ್ಷಣೆ ಒದಗಿಸುತ್ತೇವೆ ಎಂದು ಮಂಕುಬೂದಿ ಎರೆಚಿ, ನಕಲಿ ಆಭರಣಗಳನ್ನು ಇಟ್ಟು, ಅಸಲಿ ಮಾಲು ಎತ್ತಿಕೊಂಡು ಅಲ್ಲಿಂದ ಪರಾರಿಯಾಗುತ್ತಿದ್ದಾರೆ.
ಈ ರೀತಿ ಗ್ಯಾಂಗ್ ಗೋವಾ ರಾಜ್ಯದ ಜೊತೆಗೆ ನೆರೆಯ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲೂ ತನ್ನ ಜಾಲವನ್ನು ವಿಸ್ತರಿಸಿದೆ. ತನ್ನ ಗುಂಪಿನ ಸದಸ್ಯರಿಗೆ ದಿನ ಭತ್ಯೆ ರೂಪದಲ್ಲಿ ಸಾವಿರಾರು ರುಪಾಯಿ ನೀಡುವ ಈ ಗ್ಯಾಂಗ್ ಹಲವು ವರ್ಷಗಳಿಂದ ಪೊಲೀಸರಿಗೆ ತಲೆ ನೋವಾಗಿದೆ.
ಹಲವು ವರ್ಷಗಳ ಹಿಂದೆ ಬಲೂಚಿಸ್ತಾನದಿಂದ ಬಂದ ಬುಡಕಟ್ಟು ಜನಾಂಗದವರು ದಕ್ಷಿಣ ಭಾರತದಲ್ಲಿ ಕಾಲೋನಿಗಳನ್ನು ಸ್ಥಾಪಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪುಣೆ, ಔರಂಗಾಬಾದ್, ಅಂಬರ್ ನಾಥ್(ಮಹಾರಾಷ್ಟ್ರ) ಹಾಗೂ ಬೀದರ್ (ಕರ್ನಾಟಕ) ಪ್ರದೇಶದಲ್ಲಿ ಈ ಜನಾಂಗ ಹೆಚ್ಚಾಗಿ ಕಂಡು ಬಂದಿದ್ದಾರೆ.
ಪುಣೆ, ಸಿಂಧುದುರ್ಗ ಹಾಗೂ ಕರ್ನಾಟಕದ ಪೊಲೀಸರ ನೆರವಿನಿಂದ ಇರಾನಿ ಗ್ಯಾಂಗ್ ನ ದುಷ್ಕೃತ್ಯಗಳನ್ನು ಮಟ್ಟ ಹಾಕುವುದಾಗಿ ಡಿಐಜಿ ಯಾದವ್ ಹೇಳಿದ್ದಾರೆ.












Click it and Unblock the Notifications