'ಡರ್ಟಿ' ವಿದ್ಯಾ ಸ್ವಚ್ಛತಾ ಕಾರ್ಯಕ್ರಮದ ರಾಯಭಾರಿ
"ತೆರೆಯ ಮೇಲೆ ಡರ್ಟಿ ಪಿಕ್ಚರ್ ಮಾಡುವ ನಟಿಗೆ ನಿಜ ಜೀವನದಲ್ಲಿ ಕ್ಲೀನ್ ಪಿಕ್ಚರ್ ಮಾಡುವುದಕ್ಕಿಂತ ಉತ್ತಮ ಅವಕಾಶ ಮತ್ತೊಂದೇನಿದೆ? ರಾಷ್ಟ್ರಮಟ್ಟದಲ್ಲಿ ನಡೆಸಲಾಗುತ್ತಿರುವ ಆಂದೋಲನ ಜನರ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ" ಎಂದು 'ದಿ ಡರ್ಟಿ ಪಿಕ್ಚರ್'ಗಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿದ್ಯಾ ಬಾಲನ್ ಸಂತಸ ವ್ಯಕ್ತಪಡಿಸಿದ್ದಾರೆ.
"ಗ್ರಾಮೀಣ ಮಹಿಳೆ ಮತ್ತು ಮಕ್ಕಳ ಪಾಲಿನ ಪಿಡುಗಾಗಿರುವ ಅಸ್ವಚ್ಛತೆಯನ್ನು ತೊಲಗಿಸಲು ಆರಂಭಿಸಲಾಗುತ್ತಿರುವ ಈ ಕಾರ್ಯಕ್ರಮದ ರಾಯಭಾರಿಯಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ನನ್ನ ಕೈಲಿ ಸಾಧ್ಯವಾದ ಮಟ್ಟಿಗೆ ಈ ಹೊಸ ಪಾತ್ರದಲ್ಲಿ ತೊಡಗಿಕೊಳ್ಳುತ್ತೇನೆ. ನನಗೆ ಇದರ ಯಶಸ್ಸಿನ ಬಗ್ಗೆ ಸಂಪೂರ್ಣ ವಿಶ್ವಾಸವಿದೆ" ಎಂದು ಅವರು ಹೇಳಿದ್ದಾರೆ.
ಶೌಚಗೃಹ ನಿರ್ಮಾಣ ಮತ್ತು ಬಳಕೆಯ ಕುರಿತಂತೆ ಜಾಗೃತಿ ಮೂಡಿಸಲು ನಿರ್ಮಿಸಲಾಗುತ್ತಿರುವ ಜಾಹೀರಾತಿನಲ್ಲಿ ವಿದ್ಯಾ ಬಾಲನ್ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಪೂರ್ಣ ಸ್ವಚ್ಛತಾ ಆಂದೋಲನವಾಗಿರುವ 'ನಿರ್ಮಲ್ ಭಾರತ ಅಭಿಯಾನ'ದಲ್ಲಿ ಎರಡು ವರ್ಷಗಳ ಕಾಲ ವಿದ್ಯಾ ಬಾಲನ್ ಅವರು ತೊಡಗಿಸಿಕೊಳ್ಳಲಿದ್ದಾರೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಆರ್ಥಿಕವಾಗಿ ಬಲಾಢ್ಯ ರಾಷ್ಟ್ರವಾಗಿ ಭಾರತ ಹೊರಹೊಮ್ಮುತ್ತಿದ್ದರೂ, ದೇಶದ ಶೇ.60ರಷ್ಟು ಜನಸಂಖ್ಯೆ ಶೌಚಕ್ಕಾಗಿ ಬಯಲನ್ನೇ ನೆಚ್ಚಿಕೊಂಡಿದೆ. ಶೌಚಗೃಹಗಳನ್ನು ಬಳಸಲು ನಿರಾಕರಿಸುತ್ತಿರುವುದರಿಂದ ಮಹಿಳೆಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ 2010ರಲ್ಲಿ ವರದಿ ನೀಡಿತ್ತು. ಭಾರತದ ಮಹಿಳೆಯರು ಮೊಬೈಲನ್ನು ಕೇಳುತ್ತಾರೆಯೇ ಹೊರತು ಶೌಚಗೃರವನ್ನಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದು ವಿವಾದ ಸೃಷ್ಟಿಸಿತ್ತು.
ಪ್ರವಾಸದ ಖರ್ಚುಗಳನ್ನು ಹೊರತುಪಡಿಸಿ ವಿದ್ಯಾ ಬಾಲನ್ ಅವರು ಈ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಯಾವುದೇ ಹಣವನ್ನು ಪಡೆಯುತ್ತಿಲ್ಲ. ವಿದ್ಯಾ ಬಾಲನ್ ಅವರ ಜೊತೆಗೆ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಕೂಡ ಶೌಚಗೃಹದ ಬಳಕೆ, ಕೈತೊಳೆಯುವ ಕ್ರಮ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಪ್ರಚಾರದಲ್ಲಿ ತೊಡಗಲು ಒಪ್ಪಿಕೊಂಡಿದ್ದಾರೆ.













Click it and Unblock the Notifications