ಪತಿ ಜೀವಾವಧಿ ಶಿಕ್ಷೆಗೆ ಗುರಿಯಾದರೆ ಪತ್ನಿಗೆ ವಿಚ್ಛೇದನ

ಈ ಸಂಬಂಧ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಯು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾ ಕೆಎಲ್ ಮಂಜುನಾಥ್ ಅವರ ನ್ಯಾಯಪೀಠ ಈ ಆದೇಶ ನೀಡಿದೆ. ಅತ್ತ ಗಂಡ ಜೀವಾವಧಿ ಶಿಕ್ಷೆಗೆ ಗುರಿಯಾದರೆ ಇತ್ತ ಪತ್ನಿ ತನ್ನದಲ್ಲದ ತಪ್ಪಿಗೆ ಇಂತಹ ಶಿಕ್ಷೆ ಅನುಭವಿಸುವುದು ಸರ್ವಥಾ ಸಾಧುವಲ್ಲ ಎಂದು ಕೋರ್ಟ್ ಹೇಳಿದೆ.
ತಾನು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವುದನ್ನೇ ನೆಪ ಮಾಡಿಕೊಂಡು ತನ್ನ ಪತ್ನಿಗೆ ಶಿವಮೊಗ್ಗದ ಕೌಟುಂಬಿಕ ನ್ಯಾಯಾಲಯವು 2011ರ ಜುಲೈ 8 ರಂದು ವಿಚ್ಛೇದನಕ್ಕೆ ಅನುಮತಿ ನೀಡಿದೆ. ಇದು ತನಗೆ ಸ್ವೀಕಾರಾರ್ಹವಾಗಿಲ್ಲ ಎಂದು ಗಣೇಶ್ ಎಂಬ ವ್ಯಕ್ತಿ ಮೇಲ್ಮನವಿ ಸಲ್ಲಿಸಿದ್ದರು.
ಗಣೇಶ್, ಬಳ್ಳಾರಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಚಿತ್ರದುರ್ಗದ ಸರಕಾರಿ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದ ಗಣೇಶ್ 13 ವರ್ಷಗಳ ಹಿಂದೆ ವಿಜಯಾ ಎಂಬುವವರನ್ನು ಮದುವೆಯಾಗಿದ್ದರು. ಮದುವೆಯಾದ ಮೊದಲ ಆರು ತಿಂಗಳಲ್ಲಿ ದಂಪತಿ ಮಲ್ಲಾಡಿಹಳ್ಳಿಯಲ್ಲಿ ಜೀವನ ಆರಂಭಿಸಿದರು. ತತ್ಫಲವಾಗಿ, ದಂಪತಿಗೆ ಒಂದು ಮಗುವಾಯಿತು.
ಮಗುವಾದ ಮೇಲೆ ಗಣೇಶ್ ತನ್ನ ಹೆಂಡತಿಯನ್ನು ಗೋಳುಹೊಯ್ದುಕೊಳ್ಳಲು ಆರಂಭಿಸಿದ. ಇದೇ ವೇಳೆ, ತನ್ನ ಗಂಡ ಹತ್ಯೆ ಆರೋಪ ಎದುರಿಸುತ್ತಿರುವ ವಿಷಯವೂ ವಿಜಯಗೆ ತಿಳಿದುಬಂದಿತು.
ತಕ್ಷಣ ವಿಜಯ ಅದನ್ನು ತನ್ನ ಪೋಷಕರಿಗೆ ತಿಳಿಸಿದರು. ಆದರೆ ಅದು ತಪ್ಪು ಆರೋಪವಾಗಿದ್ದು, ಶೀಘ್ರವೇ ಆರೋಪಮುಕ್ತನಾಗುತ್ತಾನೆ ಎಂದು ಗಣೇಶ್ ಕುಟುಂಬದವರು ವಿಜಯನ್ನು ಪುಸಲಾಯಿಸತೊಡಗಿದರು. ಈ ಮಧ್ಯೆ, 2000ರ ನವೆಂಬರಿನಲ್ಲಿ ಆರೋಪ ಸಾಬೀತಾಗಿ ಸೆಷನ್ಸ್ ಕೋರ್ಟಿನಲ್ಲಿ ಗಣೇಶ್ ಗೆ 7 ವರ್ಷಗಳ ಜೈಲುಶಿಕ್ಷೆಯಾಯಿತು. ಮುಂದೆ ಅದು ಜೀವಾವಧಿ ಶಿಕ್ಷೆಯಾಗಿಯೂ ಮಾರ್ಪಟ್ಟಿತ್ತು. ಇಂದರಿಂದ ಕಂಗೆಟ್ಟ ವಿಜಯ, ತಕ್ಷಣ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications