ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾನಂದ ಸಂಪುಟದ ಮತ್ತೊಂದು ವಿಕೆಟ್ ಪತನ?

By Srinath
|
Google Oneindia Kannada News

megacity-scam-cp-yogeshwar-may-lose-ministership
ಬೆಂಗಳೂರು, ಫೆ. 24: ಹೊರಲಾರದಷ್ಟು ಮತ್ತು ಹೊರಬಾರದಷ್ಟು ಸಚಿವ ಖಾತೆಗಳನ್ನು ಹೊತ್ತು ಹೈರಾಣವಾಗಿರುವ ಸನ್ಮಾನ್ಯ ಮುಖ್ಯಮಂತ್ರಿ ಸದಾನಂದ ಗೌಡರ ಹೆಗಲಿಗೆ ಅತಿ ಶೀಘ್ರದಲ್ಲೇ ಮತ್ತೊಂದು ಖಾತೆ ಹೊರುವ 'ಯೋಗ' ಇದೆ.

ಯಡಿಯೂರಪ್ಪ ಅವರಿಂದ ಮುಖ್ಯಮಂತ್ರಿ ಹುದ್ದೆ ಗಿಟ್ಟಿಸಿದ ಸದಾನಂದರಿಗೆ ಯಡಿಯೂರಪ್ಪನವರು ಒಂದು ತೆಗೆದುಕೊಂಡರೆ ಎರಡು ಫ್ರೀ ಎನ್ನುವಂತೆ ತಮ್ಮ ಶಿಷ್ಯಂದಿರಿಂದ ಒಂದೊಂದೇ ಖಾತೆಯನ್ನು ಸದಾನಂದರ ತಲೆಗೆ ಕಟ್ಟುತ್ತಿದ್ದಾರೆ. ತಾಜಾ ಆಗಿ ಮೆಗಾಸಿಟಿ ಹಗರಣದ ಆರೋಪಿ, ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್‌ ಸಚಿವ ಸ್ಥಾನ ಕಳೆದುಕೊಳ್ಳುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ.

ಮೆಗಾಸಿಟಿ ಹಗರಣ ಸಂಬಂಧ ಯೋಗೀಶ್ವರ್‌ ವಿರುದ್ಧ ಒಂದಲ್ಲ ಎರಡಲ್ಲ 14 ಪ್ರಕರಣಗಳು ನಗರದ ಎಸಿಎಂಎಂ ಮತ್ತು ವಿಶೇಷ ಆರ್ಥಿಕ ಅಪರಾಧ ನ್ಯಾಯಾಲಯದಲ್ಲಿ ಗುರುವಾರ ದಾಖಲಾಗಿದೆ. ಇದನ್ನೇ ನೆಪವಾಗಿಸಿಕೊಂಡು, ಯಡಿಯೂರಪ್ಪಗೆ ಟಾಂಗ್ ನೀಡಲು ತುದಿಗಾಲಲ್ಲಿ ನಿಂತಿರುವ ಸದಾನಂದರು ಯಾವುದೇ ಕ್ಷಣ ಯೋಗೀಶ್ವರ್‌ ಅವರಿಂದ ರಾಜೀನಾಮೆ ಪಡೆಯಬಹುದು ಎಂದು ಮೂಲಗಳು ತಿಳಿಸಿವೆ. ಆದರೆ ಕೇಸು ಆಖಲಿಸಿಕೊಂಡಿರುವ ನ್ಯಾಯಾಲಯ ಪ್ರಕರಣವನ್ನು ಜೂನ್ ಗೆ ಮುಂದೂಡಿ, ತಕ್ಷಣಕ್ಕೆ ಯೋಗೀಶ್ವರ್‌ ಒಂದಷ್ಟು ರಿಲೀಫ್ ನೀಡಿದೆ.

ಪತ್ನಿ ಮಂಜು ಕುಮಾರಿ ಸೇರಿದಂತೆ ಇಡೀ ಕುಟುಂಬದ ಮೇಲೆ ಕೇಸ್: ಕೇಂದ್ರ ಸರ್ಕಾರದ (ಕೇಂದ್ರದ ಕಂಪನಿ ವ್ಯವಹಾರಗಳ ಸಚಿವಾಲಯ) ಪರ ವಕೀಲ ಪುಟ್ಟಸಿದ್ದಯ್ಯ ಎಂಬುವರು, ಮೆಗಾಸಿಟಿ ಡೆವಲಪರ್ ಮತ್ತು ಬಿಲ್ಡರ್ಸ್ (ಎಂಡಿಬಿಎಲ್‌) ಪ್ರೈ. ಲಿ. ಮೂಲಕ ವಜ್ರಗಿರಿ ಟೌನ್‌ಶಿಪ್‌ ಯೋಜನೆಯಲ್ಲಿ ಸಾವಿರಾರು ಸಾರ್ವಜಕರಿಗೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಸಿ.ಪಿ ಯೋಗೀಶ್ವರ್‌ ಹಾಗೂ ಅವರ ಕುಂಟುಂಬ ಸದಸ್ಯರ ವಿರುದ್ಧ 6 ಕ್ರಿಮಿನಲ್‌ ಖಾಸಗಿ ದೂರು ಮತ್ತು ಕಂಪನಿ ಕಾಯ್ದೆ ಉಲ್ಲಂಘನೆ ಸಂಬಂಧ 8 ಪ್ರಕರಣಗಳು ಸೇರಿದಂತೆ ಒಟ್ಟು 14 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 420, 404, 405, 464, 465, 468, 120(ಎ) 120 'ಬಿ' ಅಡಿ, ವಂಚನೆ, ದಾಖಲೆ ತಿರುಚಿದ, ನಕಲಿ ದಾಖಲೆ ಸೃಷ್ಟಿ, ಅಕ್ರಮ ಸಂಪಾದನೆ, ಅಪರಾಧಿ ಒಳಸಂಚು ಮತ್ತು ಕಂಪನಿ ಕಾಯ್ದೆಯ ಉಲ್ಲಂಘನೆ ಸಂಬಂಧ ದೂರು ದಾಖಲಿಸಲಾಗಿದೆ. ಎಲ್ಲ ಪ್ರಕರಣದಲ್ಲೂ ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್‌ ಪ್ರಮುಖ ಆರೋಪಿಯಾಗಿದ್ದಾರೆ.

ಉಳಿದಂತೆ ಅವರ ಪತ್ನಿ ಎನ್. ಮಂಜುಕುಮಾರಿ, ಸಹೋದರ ಸಿ.ಪಿ.ಗಂಗಾಧರೇಶ್ವರ್ (ಕಾರ್ಯನಿರ್ವಾಹಕ ನಿರ್ದೇಶಕ), ಬಾವಮೈದ ಪಿ.ಮಹದೇವಯ್ಯ (ನಿರ್ದೇಶಕ), ಎಚ್.ಪಿ.ರಮೇಶ್ (ಕಾರ್ಯನಿರ್ವಾಹಕೇತರ ನಿರ್ದೇಶಕ), ಸಾಂಬಶಿವರಾವ್, ಅರುಣ್ ಚರಂತಿಮಠ್ (ಅಧ್ಯಕ್ಷ) ಮತ್ತು ಅವರ ಪತ್ನಿ ಸುಜಾತಾ ಚರಂತಿಮಠ್ ವಿರುದ್ಧ ಮೊಕದ್ದಮೆಗಳು ದಾಖಲಾಗಿವೆ. (ವಿವರ ಓದಿ)

ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿದ 4ನೇ ಎಸಿಎಂಎಂ ನ್ಯಾಯಾಲಯ ಮತ್ತು ವಿಶೇಷ ಆರ್ಥಿಕ ಅಪರಾಧ ನ್ಯಾಯಾಲಯ ಯೋಗೀಶ್ವರ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳಿಗೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಜೂ. 11ಕ್ಕೆ ಮುಂದೂಡಿದೆ. ಇದರೊಂದಿಗೆ ಅರಣ್ಯ ಸಚಿವರಿಗೆ ಕಂಟಕ ಎದುರಾಗಿದೆ. ವಿಶೇಷವೆಂದರೆ ರಾಜ್ಯ ಸಿಐಡಿ ಪೊಲೀಸರು ಸಹ ಇದೇ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದಾರೆ.

English summary
A Metropolitan Magistrate court in Bangalore has issued notices to Forest minister C.P. Yogeshwar, his family members and others involved in the affairs of Megacity Limited. In the meanwhile CP Yogeshwar may lose ministership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X