ಹೆಂಡತಿ ಸತ್ತಳೆಂದು ಹೆದರಿದ ಗಂಡನ ಆತ್ಮಹತ್ಯೆ

ಆತ್ಮಹತ್ಯೆಗೆ ಯತ್ನಿಸಿದ ಹೆಂಡತಿ ಸಾವಿಗೀಡಾಗಿ ತಾನು ಕಾನೂನು ರಗಳೆಗಳನ್ನು ಎದುರಿಸಬೇಕಾಗುತ್ತದೆಂದು ಹೆದರಿದ ಗಂಡ ವಿಷ ಸೇವಿಸಿ ಬದುಕಿನ ವ್ಯಾಪಾರಕ್ಕೆ ಗುಡ್ ಬೈ ಹೇಳಿದ್ದಾನೆ. ಅದೃಷ್ಟವೋ ದುರದೃಷ್ಟವೋ ಹೆಂಡತಿ ಬದುಕಿದ್ದಾಳೆ, ಗಂಡ ಇಹಲೋಕ ತ್ಯಜಿಸಿದ್ದಾನೆ.
ಆನೇಕಲ್ ಮೂಲದ ಉಮೇಶ್ ಕೆಂಚಪ್ಪ (30) ಮತ್ತು ಅದೇ ಊರಿನ ಸವಿತಾ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ಈಗ ಅವರಿಬ್ಬರು ಮಕ್ಕಳು. ಆದರೆ ಅವರ ವೈವಾಹಿಕ ಬದುಕೆಂದೂ ಪ್ರೇಮಮಯವಾಗಿರಲಿಲ್ಲ. ಆಗಿಂದಾಗ್ಗೆ ಅವರಿಬ್ಬರ ನಡುವೆ ಜಗಳ ನಡೆಯುತ್ತಲೇ ಇರುತ್ತಿತ್ತು.
ಇದರಿಂದ ಬೇಸತ್ತ ಸವಿತಾ ಶುಕ್ರವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅವಳನ್ನು ಕೂಡಲೆ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಾಣಾಪಾಯದಿಂದ ಪಾರಾದ ಆಕೆ ಎರಡು ದಿನ ಆಸ್ಪತ್ರೆಯಲ್ಲೇ ಇರಬೇಕೆಂದು ವೈದ್ಯರು ತಾಕೀತು ಮಾಡಿದ್ದಾರೆ.
ಈ ಘಟನೆಯಿಂದ ನೊಂದುಕೊಂಡ ಉಮೇಶ್, ಮುಂದಿನ ಪರಿಣಾಮಗಳಿಗೆ ಹೆದರಿ ಮನೆಯಲ್ಲಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾನೆ. ಇದು ತಿಳಿದುಬಂದಿದ್ದು, ಉಮೇಶ್ ಸಂಬಂಧಿಗಳು ಮನೆಯ ಕದ ತಟ್ಟಿದಾಗ. ಈ ದುರಂತದಿಂದಾಗಿ ಸವಿತಾ ಗಂಡನನ್ನು ಕಳೆದುಕೊಂಡರೆ, ಮಕ್ಕಳು ಅಪ್ಪನಿಲ್ಲದೆ ಅನಾಥವಾಗಿವೆ.












Click it and Unblock the Notifications