ಬ್ಲೂ ಫಿಲಂ ಎಫೆಕ್ಟ್: ಬಿಜೆಪಿ ಸಮಾವೇಶ ಮುಂದೂಡಿಕೆ

ನಾಯಕತ್ವ ಬದಲಾವಣೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪಟ್ಟು ಹಿಡಿದು ನಡೆಸಿದ್ದ ಚಟುವಟಿಕೆಗಳಿಂದಾಗಿ ಪಕ್ಷದಲ್ಲಿ ಉಂಟಾಗಿದ್ದ ಗೊಂದಲ ಸರಿಪಡಿಸುವ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಮುಖಂಡರು ಒಟ್ಟಾಗಿ ಪ್ರವಾಸ ಮಡುವ ಮೂಲಕ ಒಗ್ಗಟ್ಟು ಪ್ರದರ್ಶನಕ್ಕೆ ಸಿದ್ಧಗೊಂಡಿದ್ದರು. ಈ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದಾಗಿ ಪ್ರಕಟಿಸಿದ್ದರು.
ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಎಲ್ಲಾ ನಾಯಕರು ಒಟ್ಟಾಗಿ ವಿಭಾಗವಾರು ಸಮವೇಶಗಳನ್ನು ನಡೆಸಿ ನಂತರ ಈ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಭೆಗಳನ್ನು ಆಯೋಜಿಸಲು ತೀರ್ಮಾನಿಸಲಾಗಿತ್ತು.ಅದರಂತೆ ನಾಳೆ ಬೆಳಗಾವಿ ಮತ್ತು ಬಿಜಾಪುರದಲ್ಲಿ ವಿಭಾಗವಾರು ಸಮಾವೇಶ ಏರ್ಪಡಿಸಲಾಗಿತ್ತು. ಆದರೆ ಶಾಸನ ಸಭೆಯಲ್ಲಿ ಸೆಕ್ಸ್ ಫಿಲಂ ವಿವಾದ ಪಕ್ಷಕ್ಕೆ ಭಾರೀ ಮುಜುಗರ ಉಂಟು ಮಾಡುವಂತೆ ಮಾಡಿದ್ದು ಸಾರ್ವಜನಿಕ ಸಭೆಯಲ್ಲೂ ಇದು ಪ್ರತಿಧ್ವನಿಸಲಿದೆ ಎಂದು ಭಾವಿಸಿರುವ ಮುಖಂಡರು ಇದೀಗ ಸಭೆಯನ್ನು ಹಠಾತ್ ಮುಂದೂಡಿದ್ದಾರೆ.
ಕೊಂಚ ದಿನದ ಮಟ್ಟಿಗೆ ಪಕ್ಷದಿಂದ ಯಾವುದೇ ಸಭೆಗಳನ್ನು ಆಯೋಜಿಸದಿರಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಷ್ಟೇ ಅಲ್ಲದೇ ಪಕ್ಷದ ವತಿಯಿಂದ ಈ ಮಾಸಾಂತ್ಯದವರೆಗೆ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸದಿರಲು ನಿರ್ಧರಿಸಿದ್ದು ಈಗಾಗಲೇ ಘೋಷಣೆಯಾಗಿದ್ದ ಕಾರ್ಯಕ್ರಮಗಳನ್ನು ಮುಂದೂಡಲು ತೀರ್ಮಾನಿಸಲಾಗಿದೆ.
ಇನ್ನು ಮಂಗಳೂರಿನಲ್ಲಿ ಮಾರ್ಚ್ 1 ಮತ್ತು 2 ರಂದು ನಡೆಸಲು ಉದ್ದೇಶಿಸಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿಗೂ ಸೆಕ್ಸ್ ಫಿಲಂ ವೀಕ್ಷಣೆ ವಿವಾದ ತಟ್ಟಿದ್ದು ಸದ್ಯದ ಸ್ಥಿತಿಯಲ್ಲಿ ಕಾರ್ಯಕಾರಣಿ ನಡೆಸದಿರುವ ನಿರ್ಧಾರಕ್ಕೆ ಬಂದಿದ್ದಾರೆ. ಒಂದು ವೇಳೆ ನಡೆಸಲೇಬೇಕು ಎಂದಾದರೆ ಬೆಂಗಳೂರಿನಲ್ಲಿ ನಡೆಸುವ ಕುರಿತು ಚಿಂತನೆ ನಡೆದಿವೆ. (ಒನ್‌ಇಂಡಿಯಾ ಕನ್ನಡ)












Click it and Unblock the Notifications