ವಿಧಾನಸಭೆಯಲ್ಲಿ ಡಿಕೆಶಿ ರೇವಣ್ಣ ಕೆಸರು ಎರಚಾಟ

ಇಬ್ಬರೂ ಪರಸ್ಪರ ಬೈದಾಡಿ ಕೂಗಾಡಿ ಕೊಂಡದಲ್ಲದೆ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಆರೋಪ - ಪ್ರತ್ಯಾರೋಪದಲ್ಲಿ ತೊಡಗಿ ಕೆಲ ಹೊತ್ತು ಸದನದಲ್ಲಿ ಬಿಸಿಬಿಸಿ ವಾತಾವರಣಕ್ಕೆ ಕಾರಣರಾದರು. ಚರ್ಚೆಯಲ್ಲಿ ಪಾಲ್ಗೊಂಡಿದ್ದ ಡಿಕೆಶಿ ಮೊದಲು ಮಾತನಾಡುತ್ತಾ, ಯಾವುದೇ ಕಾರಣಕ್ಕೂ ಈ ಮಸೂದೆ ಅಂಗೀಕಾರಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ಸರಕಾರ ಇದಕ್ಕೆ ಅನುಮೋದನೆ ನೀಡಿದರೆ ರೈತರನ್ನು ಎತ್ತಿಕಟ್ಟಿ ಹೋರಾಟ ನಡೆಸಲಾಗುವುದು ಎಂದು ಹೇಳಿಕೆ ನೀಡಿದರು. ಆಗ ಜಗಳ ಆರಂಭಿಸಿದ ರೇವಣ್ಣ, ಡಿಕೆಶಿ ಎಷ್ಟು ರೈತರನ್ನು ಒಕ್ಕಲೆಬ್ಬಿಸಿದ್ದಾರೆ ಎಂದು ಕೆಣಕಿದರು.
ಮತ್ತೆ ಮಾತು ಮುಂದುವರಿಸಿದ ರೇವಣ್ಣ, ಡಿಕೆಶಿ ಅಂಥವರು ರಾಜಕೀಯ ಕಾರಣಕ್ಕೆ ರೈತರನ್ನು ಎತ್ತಿ ಕಟ್ಟುವ ಮಾತನಾಡುತ್ತಾರೆ. ರೈತರ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ ಎಂದು ಪ್ರಶ್ತ್ನಿಸಿದ್ದು ಶಿವಕುಮಾರ್ ಅವರನ್ನು ಕೆರಳಿಸಿತು.
ಇದಕ್ಕೆ ಶಿವಕುಮಾರ್ ಉತ್ತರಿಸುತ್ತಾ, ಸುಮ್ಮನೆ ಮಣ್ಣಿನ ಮಕ್ಕಳು ಎಂದು ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಫೋಸ್ ನೀಡಿದರೆ ಸಾಲದು. ನಿಮ್ಮ ದೇವೇಗೌಡರು ಪ್ರಧಾನಿಯಾಗಿದ್ದಾಗ ರೈತರಿಗೆ ಏನ್ರೀ ಮಾಡಿದ್ರು? ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ರೈತರ 75 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಮತ್ತೆ ಕೆಂಡಕಾರುತ್ತಾ ಡಿಕೆಶಿ, ನಾವು ಮಣ್ಣಿನ ಮಕ್ಕಳು ಎಂದು ವೋಟ್ ಬ್ಯಾಂಕ್ ರಾಜಕಾರಣ ಮಾಡಬೇಡಿ. ಮಣ್ಣಿನ ಮಕ್ಕಳಿಗೆ ದ್ರೋಹ ಬಗೆದವರು ನೀವು, ಮೂರು ಎಕರೆ ಜಮೀನು ಇದ್ದವರು ಈಗ ಸಾವಿರಾರು ಎಕರೆ ಆಸ್ತಿ ಎಲ್ಲಿಂದ ಬಂತು? ರೈತರನ್ನು ಮುಂಡಾಯಿಸಿ ತಾನೇ ನೀವು ಆಸ್ತಿ ಮಾಡಿದ್ದು, ರೈತರ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿಲ್ಲ ಎಂದು ಛೇಡಿಸಿದರು.












Click it and Unblock the Notifications