ದೈಹಿಕ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಕಿರುಕುಳ, ಚಿತ್ರೀಕರಣ

ಈತ ಆ ಘಟನೆಯನ್ನು ತನ್ನ ಮೊಬೈಲಿನಲ್ಲಿ ಚಿತ್ರೀಕರಿಸಿ ವಿದ್ಯಾರ್ಥಿನಿಗೆ ಜೀವ ಬೆದರಿಕೆ ಒಡ್ಡಿದ್ದ. ಅಲ್ಲದೇ ಚಂದ್ರಶೇಖರ್ ಆಕೆಯ ಮೇಲಿನ ಲೈಂಗಿಕ ಕಿರುಕುಳ ಮುಂದುವರಿಸಿದ್ದನೆನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪೊಲಿಪು ಜ್ಯೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದ ದೈಹಿಕ ಶಿಕ್ಷಕ ಕುಂದಾಪುರ ಮೂಲದ ಚಂದ್ರಶೇಖರ ಅಡಿಗ ಅವರನ್ನು ಕಾಪು ಪೊಲೀಸರು ವಶಕ್ಕೆ ಗುರುವಾರ ಪಡೆದುಕೊಂಡಿದ್ದಾರೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದಂದು ಸದರಿ ದೈಹಿಕ ಶಿಕ್ಷಕ ವಿದ್ಯಾರ್ಥಿನಿಯನ್ನು ತನ್ನ ಕೋಣೆಯ ಬಳಿಗೆ ಕರೆದು ಲೈಂಗಿಕ ಕಿರುಕುಳ ನೀಡಿದ್ದು, ಇದನ್ನು ವಿದ್ಯಾರ್ಥಿನಿಯ ಅರಿವಿಗೆ ಬಾರದಂತೆ ತನ್ನ ಮೊಬೈಲಿನಲ್ಲಿ ಚಿತ್ರೀಕರಿಸಿಕೊಂಡಿದ್ದ. ಈ ದೃಶ್ಯಾವಳಿಗಳನ್ನು ಆತ ಇತರೇ ಮೊಬೈಲ್‌ಗಳಿಗೆ ಕಳುಹಿಸಿದ ಪರಿಣಾಮ ಪ್ರಕರಣ ಬೆಳಕಿಗೆ ಬಂದಿದೆ.
ಶಿಕ್ಷಕ ಕಿರುಕುಳ ನೀಡಿದ ಸಂದರ್ಭದಲ್ಲಿ ಆಕೆ ಪ್ರತಿಭಟಿಸಿದಾಗ ನಿನ್ನನ್ನು ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಶಿಕ್ಷಕನು ಬೆದರಿಸಿದ್ದು ಮಾತ್ರವಲ್ಲದೆ ಈ ಬಗ್ಗೆ ಯಾರಲ್ಲಾದರೂ ತಿಳಿಸಿದಲ್ಲಿ ಕೊಂದು ಬಿಡುವುದಾಗಿ ಜೀವಬೆದರಿಕೆ ಒಡ್ಡಿದ್ದ ಎಂದು ವಿದ್ಯಾರ್ಥಿನಿಯು ಪೋಷಕರಿಗೆ ತಿಳಿಸಿದ್ದಾಳೆ.
ವಿದ್ಯಾರ್ಥಿನಿಯ ಹೇಳಿಕೆಯಂತೆ ಪೋಷಕರು ನೀಡಿದ ದೂರಿನಂತೆ ಕಾಪು ಠಾಣಾಧಿಕಾರಿ ಮೋಹನ್ ಕೊಟ್ಟಾರಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications