ನಲಿವಿನ ಜೊತೆ ಕಲಿಕೆ : ಬ್ರೇನ್ ಸ್ಟಾರ್ಸ್ ಹೊಸ ಪ್ರಯೋಗ

ತಾಯಿಯೇ ಮೊದಲ ಗುರು, ಪ್ರಕೃತಿಯೇ ಮೊದಲ ಪಾಠಶಾಲೆ. ಪ್ರಕೃತಿ ಮಡಿಲಲ್ಲಿ ಆಟವಾಡುತ್ತ 40 ಶಾಲೆಯ 500 ಮಕ್ಕಳು ವಿಜ್ಞಾನದ ಅನೇಕ ಪ್ರಯೋಗಳನ್ನು ನೋಡಿದ್ದು ಮಾತ್ರವಲ್ಲದೆ, ತಾವೇ ಸ್ವತಃ ಮಾಡಿ ಜ್ಞಾನವನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಇಂಥದೊಂದು ವಿನೂತನ ವಿಜ್ಞಾನ ಹಬ್ಬವನ್ನು ಹಮ್ಮಿಕೊಂಡಿದ್ದು ಬ್ರೇನ್ ಸ್ಟಾರ್ ಎಂಬ ಸಂಸ್ಥೆ.
ಮೇಷ್ಟ್ರು ಮಾಡಿದ್ದು ನೋಡಿದ್ದಕ್ಕಿಂತ ತಾವೇ ಸ್ವತಃ ಮಾಡಿದರೆ ಹೆಚ್ಚಿನ ಅರಿವು ಸಾಧ್ಯ ಎಂಬುದನ್ನು ಅರಿತು 'ಸ್ಟಾರ್ಸ್ ಆಫ್ ನವೆಂಬರ್' ಎಂಬ ಕಾರ್ಯಕ್ರಮವನ್ನು ಮಕ್ಕಳಿಗಾಗಿ ಆಯೋಜಿಸಿತ್ತು. ಮಕ್ಕಳಿಗೆ ಅಂದು ಪ್ರಕೃತಿಯೇ ದೊಡ್ಡ ಪ್ರಯೋಗಶಾಲೆ ಎಂಬಂತೆ ಕಂಡುಬಂದಿತು.
"ವಿಷಯವನ್ನು ತಾವಾಗಿಯೇ ನೋಡಿ ಅರಿತು ಅದನ್ನು ಪ್ರಾಯೋಗಿಕ ರೂಪಕ್ಕೆ ತಂದಾಗಲೇ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಅರಿವು ಮತ್ತು ಚಿಂತನೆ ಹುಟ್ಟಲು ಸಾಧ್ಯ" ಎಂಬುದು ಬ್ರೇನ್ ಸ್ಟಾರ್ಸ್ ನ ವೀಣಾ ಜಿ. ಸೋನೋಲೆ ಅವರ ಖಚಿತ ಅಭಿಪ್ರಾಯ. ಈ ಪರಿಕಲ್ಪನೆ ಇಟ್ಟುಕೊಂಡು ಅಲ್ಲಿ ಮಿನಿ ಪ್ರಯೋಗಾಲಯ ಸೃಷ್ಟಿಯಾಗಿತ್ತು.
ಭೌತವಿಜ್ಞಾನ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತದ ಜೊತೆ ಸಂಗೀತ ಸಾಧನಗಳ ಪ್ರಯೋಗಾಲಯವನ್ನೂ ಗಿಡಮರಗಳ ನಡುವೆ ಸೃಷ್ಟಿಸಲಾಗಿತ್ತು. ಮಕ್ಕಳು ಸಂಗೀತದ ವಿವಿಧ ಸಾಧನಗಳನ್ನು ತಾವೇ ಬಾರಿಸಿ ಆನಂದಿಸಿದರು. ಕಲಿಕೆಯೊಂದಿಗೆ ಸುಡೋಕು, ಪದಬಂಧ ಮುಂತಾದ ಆಟಗಳನ್ನು ಆಡಿಸಲಾಯಿತು.
ಪ್ರೈಮಸ್ ಪಬ್ಲಿಕ್ ಸ್ಕೂಲ್, ಡಿಪಿಎಸ್ ನಾರ್ತ್, ಡಿಪಿಎಸ್ ಈಸ್ಟ್, ವಿದ್ಯಾನಿಕೇತನ್, ಸಿಲಿಕಾನ್ ಸಿಟಿ, ಮಿತ್ರಾ ಅಕಾಡೆಮಿ, ಕ್ಯಾಪಿಟಲ್ ಪಬ್ಲಿಕ್ ಸ್ಕೂಲ್ ಮತ್ತು ಸೇಂಟ್ ಪಾಲ್ ಪಬ್ಲಿಕ್ ಶಾಲೆಯ ಮಕ್ಕಳು ಈ ವಿಜ್ಞಾನ ಹಬ್ಬದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications