ಬೆಂಗಳೂರಿನ 'ಐಟಿ ಹಬ್' ಟ್ಯಾಗ್ ಕಳಚಲಿದೆ

ಅತಿ ದೊಡ್ಡ ಕಂಪನಿಗಳಾದ ಇನ್ಫೋಸಿಸ್, ವಿಪ್ರೋ ಸಂಸ್ಥೆಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಪ್ರಮುಖ ಕಂಪನಿಗಳಾಗಿದೆ. ಇದರಿಂದ ಬೆಂಗಳೂರಿನ ಕುತ್ತಿಗೆಯಲ್ಲಿ ನೇತು ಹಾಕಿರುವ 'ಐಟಿ ಹಬ್' ಟ್ಯಾಗ್ ಕಳಚಿ ಬೀಳುವ ಸಂಭವವಿದೆ ಎನ್ನಲಾಗಿದೆ.
ಇನ್ಫೋಸಿಸ್ ಹಾಗೂ ವಿಪ್ರೋ ಸಂಸ್ಥೆಗಳ ಯೋಜನೆಗೆ ನಿಗಿದಿಪಡಿಸಲಾದ ಸರ್ಜಾಪುರ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಮಂಜೂರಾತಿಗೆ ಸರ್ಕಾರ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ಸರ್ಕಾರದ ವಿಳಂಬ ನೀತಿಯಿಂದ ಬೇಸತ್ತಿರುವ ಎರಡು ಕಂಪನಿಗಳು ಸರ್ಜಾಪುರದಿಂದ ಕೋಲ್ಕತ್ತಾದ ಹೊರವಲಯದಲ್ಲಿ ತಮ್ಮ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ.
ಸರ್ಜಾಪುರದಲ್ಲಿ 1.5 ಲಕ್ಷ ಚ.ಅ ವಿಸ್ತೀರ್ಣದ ಮೊದಲ ಹಂತಕ್ಕೆ 500 ಕೋಟಿ ರು ಬಂಡವಾಳ ಹೂಡಲು ಅಜೀಂ ಪ್ರೇಮ್ ಜಿ ಒಡೆತನದ ವಿಪ್ರೋ ಸಂಸ್ಥೆ ಮುಂದಾಗಿತ್ತು. ಆದರೆ,ಈಗ ಈ ಯೋಜನೆ ಕೋಲ್ಕತ್ತಾ ಪಾಲಾಗುವ ಸಾಧ್ಯತೆಯಿದೆ.
ಇದೇ ರೀತಿ ಇನ್ಫೋಸಿಸ್ ಕೂಡಾ ಸರ್ಜಾಪುರದಲ್ಲಿ ತನ್ನ ಘಟಕ ವಿಸ್ತರಿಸಲು ಯೋಜನೆ ರೂಪಿಸಿತ್ತು. ಆದರೆ, ಸರಿಯಾದ ರಸ್ತೆ ಸಂಪರ್ಕ, ನೀರಿನ ವ್ಯವಸ್ಥೆ ಇಲ್ಲದ ಕಾರಣ, ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.
ಮೂಲ ಸೌಕರ್ಯ ಒದಗಿಸಿಕೊಡುವ ಭರವಸೆ ನೀಡಿದ್ದ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ನಾವು ಸದ್ಯಕ್ಕೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದೇವೆ ಎಂದು ಇನ್ಫೋಸಿಸ್ ನ ಹಿರಿಯ ಉಪಾಧ್ಯಕ್ಷ ರಾಮದಾಸ್ ಕಾಮತ್ ಹೇಳುತ್ತಾರೆ.
ಸದಾ ಸರ್ಕಾರವನ್ನು ದೂರುವ ಖಾಸಗಿ ಸಂಸ್ಥೆಗಳು ತಮಿಳುನಾಡು, ಪಶ್ಚಿಮ ಬಂಗಾಲ ಹಾಗೂ ಆಂಧ್ರಪ್ರದೇಶದತ್ತ ಮುಖ ಮಾಡಿದೆ. ಆದರೆ, ಆ ರಾಜ್ಯಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ ಎಂಬ ಸಾಬೀತಾಗಿರುವ ಸತ್ಯ ಸಂಗತಿ.












Click it and Unblock the Notifications