ಕೃಷ್ಣಗೆ ಜಾಮೀನು ನೀಡಿದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ: ಕೋರ್ಟ್

ಕಷ್ಣ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾ. ಕಿರಣ್ ಕಿಣಿ ಅವರು ತುಂಬಾ ಗಂಭೀರವಾಗಿಯೇ ವಾದ-ಪ್ರತಿವಾದವನ್ನು ಆಲಿಸಿದರು. ಬಳಿಕ ಗಂಭೀರ ಆರೋಪ ಎದುರಿಸುತ್ತಿರುವ ಕೃಷ್ಣಗೆ ಜಾಮೀನು ನೀಡಿದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾಸಿದಂತಾಗುತ್ತದೆ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದರು.
ಈ ಮಧ್ಯೆ ಖ್ಯಾತ ವಕೀಲ ಸಿ ಎಚ್ ಹನುಮಂತರಾಯ ಅವರು ಇನ್ನಿಲ್ಲದಂತೆ ತಮ್ಮ ಪ್ರತಿಷ್ಠಿತ ಕಕ್ಷಿದಾರನ ಪರ ಪ್ರತಿವಾದ ಮಂಡಿಸಿದರಾದರೂ ಕೋರ್ಟ್ ಅದಾಗಲೇ ಬಿಗಿ ನಿರ್ಧಾರ ತೆಗೆದುಕೊಂಡಾಗಿತ್ತು.
'ಕೆಪಿಎಸ್‌ಸಿಯ ಅಕ್ರಮ ನೇಮಕಾತಿ ಹಗರಣ ಗಂಭೀರ ಸ್ವರೂಪದ್ದಾಗಿದೆ, ನೂರಾರು ಮಂದಿಗೆ ಹಗರಣದಿಂದ ಅನ್ಯಾಯವಾಗಿದೆ. ಈ ಪ್ರಕರಣ ಇಡೀ ಸಮಾಜದ ಮೇಲೆಯೇ ಪರಿಣಾಮ ಬೀರುವಂತದ್ದಾಗಿದೆ. ಕೃಷ್ಣ ಅವರು ಕೆಪಿಎಸ್‌ಸಿ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ ಒಟ್ಟು ಹನ್ನೆರಡು ವರ್ಷಗಳ ಕಾಲ ಅಧಿಕಾರದಲ್ಲಿದ್ದರು.
ಆದ್ದರಿಂದ ಅಲ್ಲಿನ ಅಧಿಕಾರಿಗಳ ಮೇಲೆ ಅವರು ಪ್ರಭಾವ ಬೀರಿ ಸಾಕ್ಷ್ಯಗಳನ್ನು ನಾಶಪಡಿಸುವ ಮತ್ತು ತಿದ್ದುವ ಸಂಭವ ಇರುವುದರಿಂದ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು' ಎಂದು ಸಿಐಡಿ ಪೊಲೀಸರ ಪರ ವಕೀಲರಾದ ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಜಿ. ಅರುಂಧತಿ ಕುಲಕರ್ಣಿ ವಾದ ಮಂಡಿಸಿದರು.
ಈ ರೀತಿಯ ಪ್ರಕರಣಗಳಲ್ಲಿ ಜಾಮೀನು ನೀಡಬಾರದು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ಸೂಚನೆಗಳನ್ನೂ ಅವರು ನ್ಯಾಯಾಧೀಶರ ಗಮನಕ್ಕೆ ತಂದರು. ಆರೋಪಿ ರಾಜಕೀಯ ಹಾಗೂ ಅಧಿಕಾರ ಪ್ರಭಾವ ಹೊಂದಿರುವುದರಿಂದ ಸಾಕ್ಷಿಗಳಿಗೆ ಬೆದರಿಕೆ ಹಾಕಿ ದಾಖಲೆಗಳನ್ನು ನಾಶ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.
ಈ ವಾದವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಆರೋಪಿಯ ಜಾಮೀನು ಅರ್ಜಿಯನ್ನು ವಜಾ ಮಾಡಿತು.












Click it and Unblock the Notifications