ಭರವಸೆಯ ಅಥ್ಲೀಟ್ ಬ್ರಹ್ಮಾವರದ ಪೃಥ್ವಿ ನೇಣಿಗೆ ಶರಣು

ಇಲ್ಲಿನ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (ಕಾಮರ್ಸ್) ಯಲ್ಲಿ ಕಲಿಯುತ್ತಿದ್ದ ಪೃಥ್ವಿ ಶಾಲಾ ದಿನಗಳಿಂದಲೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ಪದಕಗಳನ್ನು ಜಯಿಸಿದ ಪ್ರತಿಭಾನ್ವಿತ ಕ್ರೀಡಾಪಟು. ಸೆ. 24ರಿಂದ 26ರವರೆಗೆ ಮಂಡ್ಯದಲ್ಲಿ ನಡೆದ ಮೈಸೂರು ವಲಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಹಿಳೆಯರ ಜಾವೊಲಿನ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು, ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ತನ್ನ ಹಾಸ್ಟೆಲ್ ರೂಮಿಗೆ ವಾಪಸಾಗಿದ್ದರು. ಮಧ್ಯಾಹ್ನದ ವೇಳೆ ಕೋಣೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಂಪಾರಿನ ಬಡಕುಟುಂಬದಿಂದ ಬಂದ ಪೃಥ್ವಿಯ ತಂದೆ ಶೇಖರ ಪೂಜಾರಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಅಂಪಾರಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ಪ್ರತಿಭಾವಂತ ಕ್ರೀಡಾಪಟುವಾಗಿದ್ದ ಈಕೆ, ಅಂಪಾರಿನ ಸಂಜಯಗಾಂಧಿ ಪ್ರೌಢಶಾಲೆಯಲ್ಲಿ ತನ್ನ ಸಾಮರ್ಥ್ಯವನ್ನು ಮೊದಲ ಬಾರಿ ಪ್ರದರ್ಶಿಸಿದ್ದಳು.
ಸೂಕ್ತ ಜಾವೊಲಿನ್ ಲಭ್ಯವಿಲ್ಲದ್ದರಿಂದ ಆಕೆ ಬಿದಿರಿನ ಕೋಲನ್ನು ಬಳಸಿ ಶಾಲೆ ಮತ್ತು ಮನೆಯಲ್ಲಿ ಅಭ್ಯಾಸ ನಡೆಸುತ್ತಿದ್ದಳು. ಬಿದಿರಿನ ಕೋಲನ್ನು 40 ಮೀ. ದೂರ ಎಸೆಯುತ್ತಿದ್ದ ಈಕೆ ಕೊನೆಗೆ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದಿದ್ದಳು.
ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ಛಲದಿಂದ ತನ್ನ ಇತರ ಇಬ್ಬರು ಸಹಪಾಠಿ ಗಳೊಂದಿಗೆ ಬ್ರಹ್ಮಾವರ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ಸೇರಿ, ಕಾಲೇಜಿನ ಮಹಿಳೆಯರ ಹಾಸ್ಟೆಲ್‌ನಲ್ಲಿದ್ದು, ಹೆಗ್ಡೆಯವರ ಮಾರ್ಗದರ್ಶನದಲ್ಲಿ ಕ್ರೀಡಾ ತರಬೇತಿ ಪಡೆಯುತ್ತಿದ್ದಳು.












Click it and Unblock the Notifications