ಬ್ರಹ್ಮಾವರದ ಅಥ್ಲೀಟ್ ಪೃಥ್ವಿಗೆ ಪ್ರೇಮದ ಕಾಟವಿತ್ತಾ?

ಈ ಮಧ್ಯೆ, ತಮ್ಮ ಮಗಳ ಸಾವಿನ ಕುರಿತಂತೆ ಪೃಥ್ವಿಯ ಹೆತ್ತವರು ಸಂಶಯ ವ್ಯಕ್ತಪಡಿಸಿದ್ದು, ಇದರಿಂದ ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಬೇಕಿದ್ದ ಶವಪರೀಕ್ಷೆಯನ್ನು ಮಣಿಪಾಲಕ್ಕೆ ವರ್ಗಾಯಿಸಲಾಗಿದೆ. ಪೋಸ್ಟ್ ಮಾರ್ಟಮ್ ಬುಧವಾರ ನಡೆಯಲಿದೆ.
ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದು, ಆಕೆ ಚೆನ್ನಾಗಿಯೇ ಮಾತನಾಡಿದ್ದಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮನೋಭಾವದವಳಲ್ಲ ಎಂಬುದು ಶೇಖರ ಪೂಜಾರಿಯವರ ಅನಿಸಿಕೆಯಾಗಿದೆ. ಈ ಬಗ್ಗೆ ಶಂಕರ್ ಪೂಜಾರಿ ಎಂಬವರು ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದರಲ್ಲಿ ಕಾಲೇಜಿನ ಮುಖ್ಯಸ್ಥರು, ಆಕೆಯ ತರಬೇತುದಾರರು ಹಾಗೂ ಹಾಸ್ಟೆಲ್‌ನ ಮೇಲ್ವಿಚಾರಕರ ಮೇಲೆ ಸಂಶಯ ವ್ಯಕ್ತಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ರೂಮ್‌ಮೇಟ್ ಆಗಿದ್ದ ಮತ್ತೊಬ್ಬ ಕ್ರೀಡಾಪಟು ದಿವ್ಯಾ ಎಂಬಾಕೆ ಬಟ್ಟೆ ಒಗೆಯಲೆಂದು ಹೋಗಿದ್ದಾಗ ಆಕೆ ಈ ಕೃತ್ಯ ಎಸಗಿದ್ದಾಗಿ ತಿಳಿದುಬಂದಿದೆ. ಪೃಥ್ವಿಯಂತೆ ಬಸ್ರೂರು ಸಮೀಪದ ಅಂಪಾರಿನವರೇ ಆದ ದಿವ್ಯಾ ಸುಮಾರು 15-20 ನಿಮಿಷಗಳ ಬಳಿಕ ರೂಮಿಗೆ ಮರಳಿದಾಗ, ಒಳಗಿನಿಂದ ಚಿಲಕ ಹಾಕಲಾಗಿತ್ತು. ಎಷ್ಟು ಕರೆದರೂ ಬಾಗಿಲು ತೆರೆಯದಿದ್ದಾಗ ಕಿಟಕಿಯಿಂದ ನೋಡಿದಾಗ ಫ್ಯಾನಿಗೆ ನೇಣು ಬಿಗಿದಿರುವುದು ಕಂಡು ಬಂತು.
ಕೂಡಲೇ ವಾರ್ಡನ್ ಸೇರಿದಂತೆ ಹಾಸ್ಟೆಲ್‌ನ ಎಲ್ಲರೂ ಸೇರಿ ಬಾಗಿಲು ಮುರಿದು ಒಳಗೆ ಬಂದು ಆಕೆಯನ್ನು ಸಮೀಪದ ಮಹೇಶ್ ಆಸ್ಪತ್ರೆಗೆ ಕರೆತಂದರೂ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದರು.
23ರಂದು ಮೈಸೂರಿಗೆ ತೆರಳಿದ್ದ ಪೃಥ್ವಿ, ಮಂಗಳವಾರ ಬೆಳಗ್ಗೆ 9 ಗಂಟೆಗೆ ಲವಲವಿಕೆಯಿಂದಲೇ ಮೈಸೂರಿನಿಂದ ಮರಳಿದ್ದರು. ಸ್ನೇಹಿತೆಯರಿಗೆಲ್ಲ ಸಿಹಿ ನೀಡಿ ಅವರೊಂದಿಗೆ ಖುಷಿಯನ್ನು ಹಂಚಿ ಕೊಂಡಿದ್ದರೆಂದು ಎಸ್‌ಎಂಎಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ ಹೆಗ್ಡೆ ತಿಳಿಸಿದರು.
ಆದರೆ ಆಕೆಯ ಈ ಹಠಾತ್ ನಿರ್ಧಾರಕ್ಕೆ ಕಾರಣವೇನೆಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆಕೆ ಆತ್ಮಹತ್ಯೆಗೆ ಮುನ್ನ ಯಾವುದೇ ಪತ್ರ ಬರೆದಿಟ್ಟಿಲ್ಲ. ಆದರೆ ಆಕೆ ಪ್ರತಿದಿನ ಬರೆಯುತ್ತಿದ್ದ ಡೈರಿ ಸಿಕ್ಕಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬ್ರಹ್ಮಾವರ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications