ಸದಾ, ಯಡ್ಡಿ ಮಧ್ಯದಲ್ಲಿ ಕರಡಿ ಬಿಟ್ಟರಂತೆ

ಅಧಿಕೃತ ಅಭ್ಯರ್ಥಿ ಸಂಗಣ್ಣ ಕರಡಿ ಗೆದ್ದರೆ ಇದೇ ಮೊದಲ ಬಾರಿಗೆ ಕ್ಷೇತ್ರದ ಶಾಸಕರು ಪ್ರತಿನಿಧಿಸುವ ಪಕ್ಷ ಆಡಳಿತದಲ್ಲಿ ಇದ್ದ ಹಾಗಾಗುತ್ತದೆ. ಯಡಿಯೂರಪ್ಪ ಮುಖದಲ್ಲಿ ಸದಾನಂದರ ನಗು ಕಾಣಿಸಿಕೊಳ್ಳುತ್ತದೆ.
ಬೇರೆ ಯಾರೇ ಗೆದ್ದರೂ ಮತ್ತೆ ಇತಿಹಾಸ ಪುನರಾವರ್ತನೆಯಾಗುತ್ತದೆ. ಖುಷಿಯಾದರೂ ನಗಲಾರದ ಪರಿಸ್ಥಿತಿ ಸದಾನಂದ ಗೌಡರ ಪಾಲಿಗೆ ಒದಗಿ ಬರಲಿದೆ.
ಬಿಜೆಪಿಯಿಂದ ಉಚ್ಛಾಟಿತರಾಗಿ ಕಾಂಗ್ರೆಸ್ ಸೇರಿರುವ ಬಸವರಾಜ್ ಹಿತ್ನಾಳ್ ಅವರು ಕಾಂಗ್ರೆಸ್ ನಿಂದ ಅಭ್ಯರ್ಥಿಯಾಗಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಜೆಡಿಎಸ್ ತೆನೆ ಹೊತ್ತ ಮಹಿಳೆಯನ್ನು ಕಮಲದ ಕೈ ಹಿಡಿದ ಸಂಗಣ್ಣ ಆಯ್ಕೆ ಯಾಕೋ ಹಾಲಿ ಸಿಎಂಗೆ ಸಮಾಧಾನ ತಂದ ಹಾಗೆ ಇಲ್ಲ.
ಯಡಿಯೂರಪ್ಪ vs ಸದಾನಂದ ಗೌಡ ಎಂಬ ಅಘೋಷಿತ ಸಮರ ಆರಂಭವಾಗಿದೆ. ಈ ಆಂತರಕ ಯುದ್ಧಕ್ಕೆ ಕರಡಿ ಸಂಗಣ್ಣ ದಾಳವಾಗಿದ್ದಾರೆ. ಸಂಗಣ್ಣ ಗೆದ್ದರೂ ಕಷ್ಟ, ಸೋತರೂ ಕಷ್ಟ ಎಂಬ ಸಂಧಿಗ್ದತೆಯಲ್ಲಿದ್ದಾರೆ.
ಆದರೆ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಈ ಬಾರಿ ಎರಡು ವೈಶಿಷ್ಟ್ಯಗಳಿವೆ. ಇದು ಕ್ಷೇತ್ರಕ್ಕೆ ನಡೆಯುತ್ತಿರುವ ಮೊದಲ ಉಪಚುನಾವಣೆ ಎಂಬುದು ವಿಶೇಷ.
ವಿರೋಧ ಪಕ್ಷದಲ್ಲಿದ್ದ ಶಾಸಕರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಆಡಳಿತಾರೂಢ ಪಕ್ಷದಿಂದ ಕಣಕ್ಕೆ ಇಳಿದಿರುವುದು ಮತ್ತೊಂದು ವಿಶೇಷ. ಹೀಗಾಗಿ ಈ ಉಪ ಚುನಾವಣೆಯ ಫಲಿತಾಂಶ ಎಲ್ಲ ದೃಷ್ಟಿಯಿಂದಲೂ ಕುತೂಹಲಕ್ಕೆ ಕಾರಣವಾಗಲಿದೆ.
ಸದಾ ಅತ್ತಿದ್ದು ಯಾಕೆ?: ಹಸನ್ಮುಖಿ ಸಿಎಂ ಸದಾನಂದ ಗೌಡರು, ಯಡಿಯೂರಪ್ಪ ಅವರಂತೆ ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದು ಯಾಕೆ ಎಂಬುದು ಅಲ್ಲಿದ್ದ ಪದಾಧಿಕಾರಿಗಳಿಗೆ ಮೊದಲಿಗೆ ಅರ್ಥ ಆಗಲೇ ಇಲ್ಲ. ನಂತರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆದರ್ಶವನ್ನು ನೆನೆದು, ಅವರ ಆಸೆಯಂತೆ ದಕ್ಷಿಣದಲ್ಲಿ ಕೇಸರಿ ಪಕ್ಷ ಅಧಿಕಾರದಲ್ಲಿದೆ ಆದರೆ, ಅವರು ಈಗ ಅನಾರೋಗ್ಯದಿಂದ ಬಳಲುತ್ತಿದ್ದಿರುವುದು ದುಃಖ ತಂದಿದೆ ಎಂದು ಡಿವಿಎಸ್ ಕಣ್ಣೀರಿಟ್ಟಿದ್ದಾರೆ.












Click it and Unblock the Notifications