ಹೆಂಡ್ತಿ ಜನ್ಮದಿನ ಮರೆತ ಪಾಪ ಪಾಂಡು ಪರಲೋಕಕ್ಕೆ

ಏನಾಯಿತೆಂದರೆ... ರಷ್ಯಾ ಮಹಿಳೆಯೊಬ್ಬಳು ತನ್ನ ಜನ್ಮ ದಿನದಂದು ಬರಿಗೈ ದಾಸನಾಗಿ ಮನೆಗೆ ವಾಪಸಾದ ಗಂಡನನ್ನು ನೋಡಿದವಳೇ ನಖಶಿಖಾಂತ ಉರಿದುರಿದು ಹೋಗಿದ್ದಾಳೆ. ಅದೇ ಸಿಟ್ಟಿನ ಭರದಲ್ಲಿ 45 ವರ್ಷದ ಸಾಧ್ವಿಮಣಿ ಲ್ಯಾಲ್ಯಾ ಟುಪಿಕೋವಾ, ತನ್ನ ಪತಿರಾಯ ಖಾಲ್ಪಿಕ್ (50) ನನ್ನು ಇರಿದಿರಿದು ಸಾಯಿಸಿದ್ದಾಳೆ.
'ಸಾಕ್ಷಾತ್ ಹೆಂಡತಿಯ ಜನ್ಮ ದಿನದಂದು ಆಫೀಸಿಗೆ ಹೋಗೋದೆ ತಪ್ಪು. ಆದರೂ ಕಚೇರಿಯಿಂದ ಬರುವಾಗ...ಏನಾದ್ರೂ ತರುತ್ತಾನೆ ಬಿಡು ಎಂದು ಹೆಂಡ್ತಿಯೂ ಸಮಾಧಾನ ಮಾಡಿಕೊಂಡು ಸುಮ್ಮನಿದ್ದಳು. ಜತೆಗೆ ಪ್ರೀತಿಯಿಂದ ವಿಶೇಷ ಅಡುಗೆಯನ್ನೂ ಮಾಡಿದ್ದಳು' ಎಂದು ಪ್ರಕರಣವನ್ನು ವಿವರಿಸಿ 'ಡೈಲಿ ಮೇಲ್' ವರದಿ ಮಾಡಿದೆ.
ಮನೆಗೆ ಬಂದ ಪತಿರಾಯ ಏನೂ ತಂದಿಲ್ಲ ಎಂಬುದನ್ನು ಗ್ರಹಿಸಿದ ಟುಪಿಕೋವಾ, ಅಪಾರ ಪ್ರೀತಿಯಿಂದಲೇ ಗಂಡನಿಗೆ ಉಣಬಡಿಸಿದ್ದಾಳೆ. ಆದರೆ ಗಂಡನ ಮಹಾರಾಧದ ಬಗ್ಗೆ ಮಧ್ಯೆ ಯಾವಾಗಲೋ ದುಃಖ ಉಮ್ಮಳಿಸಿಕೊಂಡು ಬಂದು ಪಿತ್ತ ನೆತ್ತಿಗೇರಿರಬೇಕು. ಸರಿ, ಅಲ್ಲೇ ಹಣ್ಣು ಕತ್ತರಿಸಲು ಇಟ್ಟಿದ್ದ ಚಾಕುವನ್ನು ಚಕ್ಕಂತ ತೆಗೆದುಕೊಂಡವಳೇ ಕಚಕ್ ಕಚಕ್ ಅಂತ ಗಂಡನ ಎದೆಯ ಮೇಲೆ ಒಂದೇ ಸಮನೆ ತಿವಿದಳು. ಪಾಪ ಪಾಂಡು! ಅಲ್ಲೇ ಗೊಟಕ್.












Click it and Unblock the Notifications