ಅಮ್ಮಾ ನಾ ಸೇಲಾದೆ, ಬಳ್ಳಾರಿ ರೆಡ್ಡಿಗಳ ಅಡಿಯಾಳಾದೆ...

ಖಡ್ಗದ ತೂಕ ಒಂದೂವರೆ ಕೆಜಿ. ಹೇಳಿ ಕೇಳಿ ಚಿನ್ನ ಈಗ ಗಗನದಲ್ಲಿದೆ. ಸೋ ಖಡ್ಗದ ಮೌಲ್ಯ 40 ಲಕ್ಷ ರೂ! ಖಡ್ಗವನ್ನು ತಿರುಪತಿಯಲ್ಲಿ ತಯಾರಿಸಲಾಗಿದೆ. ಗಡ್ಕರಿಯ ದೈಹಿಕ ತೂಕವನ್ನು ಜತೆಗೆ ರಾಜಕೀಕ ಸಾಮರ್ಥ್ಯವನ್ನು ಅಳೆದುಸುರಿದೇ ಈ ಉಡುಗೊರೆ ದಯಪಾಲಿಸಲಾಗಿದೆ.
ಇನ್ನು, ನಾವೇನು ಪಾಪ ಮಾಡಿದ್ದೇವೆ. 'ನಮಗೂ ಕೊಡಿ ರೆಡ್ಡಿಗಳೇ' ಎಂದು ಅಲ್ಲಿದ್ದ ಉಳಿದ ತೂಕದ ನಾಯಕರು ಬೇಡಿಲ್ಲ ಎಂಬುದೇ ನಿಜ ಸಂಗತಿ. ಆದರೆ ಸಾಮೂಹಿಕ ವಿವಾಹ ಭಾಗ್ಯ ಕಂಡ ಹೆಣ್ಣುಮಕ್ಕಳು 'ಗಡ್ಕರಿಯವರೇ, ಆ ಖಡ್ಗವನ್ನು ವಸಿ ಇತ್ಲಾಗೆ ಕೊಡಿ ನಾವೆಲ್ಲ ಒಂಚೂರು ಚೂರು ಮುರ್ಕೊಂಡು ಕೊಡ್ತೀವಿ' ಎಂದು ಕೇಳಿದ ಸುದ್ದಿ ಬಂದಿಲ್ಲ.
ರೆಡ್ಡಿ ಸೋದರರು ಬಳ್ಳಾರಿಯಲ್ಲಿ ಪ್ರಾಯೋಜಿಸುವ ವಾರ್ಷಿಕ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬಿಜೆಪಿ ಅಧಿನಾಯಕ ನಿತಿನ್ ಗಡ್ಕರಿಗೆ ಗಾಲಿ ರೆಡ್ಡಿ ಸೋದರರು ಈ ಖಡ್ಗ ನೀಡಿದ್ದಾರೆ. ಜತೆಗೆ, ತಮ್ಮ ಪ್ರೀತಿಯ ಕರೆಗೆ ಓಗೊಟ್ಟು ಬಳ್ಳಾರಿಗೆ ಆಗಮಿಸಿದ ಪಕ್ಷದ ರಾಷ್ಟ್ರಾಧ್ಯಕ್ಷರಿಗೆ ರೆಡ್ಡಿಗಳು 1.5 ಕೋಟಿ ರೂ. ಬೆಲೆ ಬಾಳುವ ಐಷಾರಾಮಿ ರೇಂಜ್ ರೋವರ್ ಕಾರೊಂದನ್ನೂ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.
ರೋವರ್ ಕಾರಿನಲ್ಲಿ ಚಿನ್ನದ ಖಡ್ಗ: ರೆಡ್ಡಿಗಳು ದುಬಾರಿ ಉಡುಗೊರೆ ಕೊಡುವುದು ಇದೇ ಮೊದಲಲ್ಲ. ಬಳ್ಳಾರಿ ವರಮಹಾಲಕ್ಷ್ಮಿ ಪೂಜೆಗೆ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಳುವ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಬೆಳ್ಳಿ ಇಲ್ಲವೇ ಬಂಗಾರದ ಖಡ್ಗ ಹಾಗೂ ಭಾರೀ ಮೌಲ್ಯದ ವಾಹನ ಉಡುಗೊರೆ ನೀಡುವ ಸಂಪ್ರದಾಯ ದಶಕಗಳಿಂದ ನಡೆದುಕೊಂಡು ಬಂದಿದೆ. ಇದೀಗ 1.5 ಕೋಟಿ ಮೌಲ್ಯದ ರೋವರ್ ಕಾರಿನಲ್ಲಿ ಚಿನ್ನದ ಖಡ್ಗ ಹೊತ್ತೊಯ್ಯುವ ಭಾಗ್ಯ ಗಡ್ಕರಿಗೆ ಒಲಿದಿದೆ ಅಷ್ಟೆ.
ಅಷ್ಟಕ್ಕೂ, ರಾಜಕೀಯ ನೆಲೆಗಟ್ಟಿನಲ್ಲಿ ಲೋಕಾಯುಕ್ತ 'ಗಣಿಗಾರಿಕೆ' ವರದಿಯಿಂದ ಬಸವಳಿದಿರುವ ಗಾಲಿ ರೆಡ್ಡಿಗಳು ಮತ್ತೆ ಸಚಿವ ಸ್ಥಾನ ಪಡೆಯಲು ಶತಾಯಗತಾಯ ಹೋರಾಡುತ್ತಿದ್ದು, ವರಿಷ್ಠರನ್ನು ಒಲಿಸಿಕೊಳ್ಳುವ ತಂತ್ರ ಇದಾಗಿದೆ ಎಂದು ವಿಶ್ಲೇಷಿಸಬಹುದಾಗಿದೆ.












Click it and Unblock the Notifications